ಶನಿವಾರ, ಜನವರಿ 8, 2011

ಸಹೃದಯತೆಯ ಬರದಲ್ಲಿ ಸೊರಗುತ್ತಿರುವ ಕೇಳಿಕೆ ಮತ್ತು ತೊಗಲುಗೊಂಬೆಯಾಟ

ಸಹೃದಯತೆಯ ಬರದಲ್ಲಿ ಸೊರಗುತ್ತಿರುವ ಜಾನಪದ ಕಲೆಗಳು. ಕನ್ನಡನಾಡು ಚಿನ್ನದಬೀಡು; ಕವಿಗಳ ನಾಡು ಕಲೆಗಳ ಬೀಡು ಎಂಬ ಅಲಂಕಾರಿಕ ವೈಭವದ ಬಣ್ಣದ ಮಾತಿನಲ್ಲಿ ಮೈಮರೆತಿರುವ ನಾವು ನಮ್ಮ ನೆಲದ ಪರಿಸರದಲ್ಲಿ ಅರಳಿದ ಜಾನಪದ ಕಲೆಗಳಿಗೆ ಬಂಗಾರದ ಮೆರಗಿತ್ತು ಆಧರಿಸಿಟ್ಟುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. 'ಜಾನಪದ ಕಲಾಸಿರಿ'ಯನ್ನು ನಿರ್ಲಕ್ಷ್ಯಕ್ಕೀಡು ಮಾಡಿ ಬಡವರಲ್ಲಿ 'ಬಡವ'ರಾಗುತ್ತಿದ್ದೇವೆ. ಆಧುನೀಕರಣ ಅಬ್ಬರದ ನಡುವೆ 'ಆಶ್ರಯದಾತ'ರಿಲ್ಲದೆ ಅನೇಕ ಕಲಾರೂಪಗಳು ಕೊರಗಿ ಕೈಕಾಲುಗಳು ಮುರಿದುಕೊಂಡು ತೆವಲುತ್ತಿವೆ. ಕಲಿಯುವ ಕಲಾಸಕ್ತರಿಲ್ಲದೆ ತಮ್ಮ ಕೊನೆಯ ಕೊಂಡಿಗಳನ್ನು ಕಳಚಿಕೊಳ್ಳುತ್ತಿವೆ ; ತನ್ನ ಸಾಚಾತನವನ್ನು ಕಳೆದುಕೊಂಡು ಇಂದು ಬಹುತೇಕ ಪ್ರದರ್ಶನಾತ್ಮಕ ಕಲಾ ಪ್ರಕಾರಗಳು ವ್ಯಾಪಾರೀರಣಗೊಳ್ಳುತ್ತಿವೆ. ಅಂತಹ ಜಾನಪದ ಕಲಾ ಪಕಾರಗಳಲ್ಲಿ ಪ್ರಾತಿನಿಧಿಕವಾಗಿ ಕೇಳಿಕೆ ಮತ್ತು ತೊಗಲುಗೊಂಬೆಯಾಟವನ್ನು ಇಲ್ಲಿ ಚಚರ್ಿಸಲಾಗಿದೆ.
ಕೇಳಿಕೆ:
ಕೇಳಿಕೆ ಕನ್ನಡ ನಾಡಿನಲ್ಲಿ ಬಯಲಾಟ,ದೊಡ್ಡಾಟ ಮತ್ತು ಸಣ್ಣಾಟವೆಂದು ಖ್ಯಾತಿ ಪಡೆದ ಜಾನಪದ ಪ್ರದರ್ಶನಾತ್ಮಕ ಕಲಾ ಪ್ರಕಾರಗಳಲ್ಲಿ ಕೇಳಿಕೆಯು ಒಂದು. ಕಂದೆಲುಗು ನೆಲದಲ್ಲಿ ಕೇಳಿಕೆಯೆಂದೇ ಪಂಡಿತ ಪಾಮರರ ಮನ ಗೆದ್ದದ್ದು. ಗ್ರಾಮೀಣ ಪರಿಸರದ ಈ ಕೇಳಿಕೆಗಳ ಕಲಾವಿದರು 'ವಿರಾಟ ಪರ್ವ','ಕುರುಕ್ಷೇತ್ರ','ಸಂಪೂರ್ಣ ರಾಮಾಯಣಂ', ಚಂಚುಲಕ್ಷ್ಮಿ, ನಲ್ಲತಂಗಿ, ಸಾಸೂಲು ಚಿನ್ನಮ್ಮ, ದಸಿಂಗರಾಜು, ಮಾಯಲ ಮರಾಠಿ, ಮುಂತಾದ ನಾಟಕಗಳಲ್ಲಿ ಮಿಂಚಿ ಅಪಾರ ಅಭಿಮಾನಿ ಆಶ್ರಯದಾತರ ಬಳಗವನ್ನು ಪಡೆದಿದ್ದರು.
ನಾಡಿನ ಬಹುತೇಕ ಬಯಲಾಟಗಳ ಪ್ರದರ್ಶನ ಭಾಷೆ ಕನ್ನಡ. ಕೇಳಿಕೆ ಪ್ರಕಾರ ವಿಶೇಷ ಆದರಣೆಗೆ ಒಳಗಾಗಿ ಪ್ರದರ್ಶನವಾಗುತ್ತಿದ್ದುದು ಗಡಿನಾಡಿನ ನೆಲಗಳಲ್ಲಿ. ಆದುದರಿಂದ ಆ ನೆಲದ ಭಾಷೆಯೇ ಅದರ ಪ್ರದರ್ಶಕ ಭಾಷೆಯಾಗಿರುತ್ತಿತ್ತು. ಕನ್ನಡ ಮತ್ತು ತಮಿಳು ಸೀಮೆಗಳಲ್ಲಿ ಕೇಳಿಕೆಯನ್ನು ಆಧರಿಸಿ ಅಭಿಮಾನ ತೋರಿದ್ದರೂ ಇದರ ಮೂಲನೆಲ ಮತ್ತು ಭಾಷೆ ತೆಲುಗುನಾಡು. ಆದರೆ ವೃತ್ತಿ ತಂಡಗಳಿಂದ ಪ್ರದಶರ್ಿತವಾಗುತ್ತಿದ್ದ ಈ ದೃಶ್ಯಕಾವ್ಯವು ಹವ್ಯಾಸಿಗಳನ್ನು ತನ್ನ ತೆಕ್ಕೆಗೆ ಸೆಳೆದುದುಂಟು. ಜನಮನವನ್ನು ರಂಜಿಸಿ ಕನ್ನಡ ನೆಲದಲ್ಲೂ ಪಾದವೂರಿತು.
ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ಎಂಬಂತೆ ಒಂದು ಗ್ರಾಮದಲ್ಲಿ 'ಕೇಳಿಕೆ' ಎಂದರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನ ತಂಡೋಪ ತಂಡವಾಗಿ ಬಂದು ನೋಡಿ ಆನಂದಿಸುತ್ತಿದ್ದರು ; ಅಭಿನಂಧಿಸುತ್ತಿದ್ದರು. ಮರುದಿನ ಬೆಳಕಿಗೆ ಬರುವ ಕಲಾವಿದರಿಗೆ ತಮ್ಮ ಕೈಲಾದಷ್ಟು ದುಡ್ಡು-ದುಗಾಣಿಯನ್ನೋ, ಧವಸ-ದಾನ್ಯಗಳನ್ನೋ ಬಟ್ಟೆ ಬರೆಗಳನ್ನೋ ನೀಡಿ, ನಟರನ್ನು ನಟನೆಯನ್ನು ಮೆಚ್ಚಿಕೊಂಡು 'ಪೊಗಡು'(ಹೊಗಳಿಕೆ) ಕೊಡುತ್ತಿದ್ದರು. ಅಲ್ಲದೆ ಮತ್ತೊಂದು ದಿನದ ನಾಟಕ ಪದರ್ಶನಕ್ಕೆ ಅನುವು ಮಾಡಿಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಇಂದು ಆಶ್ರಯದಾತರಿಲ್ಲದೆ ವೃತ್ತಿ ಕಲಾ ತಂಡಗಳು ಕ್ಷೀಣಿಸುತ್ತಿವೆ. ಹವ್ಯಾಸಿ ಕಲಾವಿದರ ಆಸಕ್ತಿ ನೆಲೆಯಲ್ಲಿ ಅಷ್ಟಿಷ್ಟು ಉಸಿರು ಉಳಿಸಿಕೊಂಡಿರುವ ಕೇಳಿಕೆಗಳಿಗೆ ಹಿಂದಿನ ಆದರಾಭಿಮಾನ ವ್ಯಾಪಕತೆ ಇಲ್ಲದಾಗಿದೆ. ಹವ್ಯಾಸಿಗಳ ಆಸಕ್ತಿಯಿಂದಷ್ಟೆ ನಾಡಿನ ಗಡಿಗಳಲ್ಲಿ ಉಳಿದುಕೊಂಡಿರುವ ಕೇಳಿಕೆಗಳಿಗೆ ಪರಂಪರಾಗತ ಸಾಂಪ್ರದಾಯಿಕ ನೆಲೆಯಿಲ್ಲದಾಗಿದೆ. ಇಂದಿನ ಕೇಳಿಕೆಗಳಲ್ಲಿ ಸೊರಗಿದ ಸಂಗೀತಾಲಾಪನೆ ಕೇಳಿ ಬರುತ್ತಿದೆ. ಅದ್ಭುತ ಗಾನಲಹರಿಯ ವಿಶಿಷ್ಟ ಗತ್ತು ಗಮ್ಮತ್ತುಗಳಲ್ಲಿ ಹಾಡಿ ರಂಜಿಸುತ್ತಿದ್ದ ಕಲಾವಿದರು ಮರೆಯಾಗಿದ್ದಾರೆ. ಹವ್ಯಾಸಿಗಳಲ್ಲಿ ಮಾತ್ರವಲ್ಲದೆ ವೃತ್ತಿ ಕಲಾವಿದರಲ್ಲೂ ಈ ಕೊರತೆಯಿದೆ. ಪರಂಪರೆಯನ್ನು ಅರಿತ ಕಲಿಕೆಯ ಕೊರತೆ, ಜತೆಗೆ ಅದರಲ್ಲಿ ಕ್ಷೀಣಿಸಿದ ಆಸಕ್ತಿ ಇದಕ್ಕೆ ಕಾರಣವಾಗಿದೆ. ಇದನ್ನು ನೀಗಲು ಮಾತುಗಾರಿಕೆಗೆ ಇಲಿದಂತೆ ಕಾಣುತ್ತದೆ. ಹಳೆಯ ಮಟ್ಟುಗಳು ,ಕಂದಸೀಸಪದ್ಯಗಳು ಮರೆಗೆ ಸರಿದು ಅವುಗಳ ಸ್ಥಾನದಲ್ಲಿ ಪೌರಾಣಿಕ ಸಿನಿಮಾದ ಜನಪ್ರಿಯ ಹಾಡುಗಳು ಹಾಗೂ ಭಕ್ತಿ ಗೀತೆಗಳು ಬಳಕೆಗೆ ಬಂದಿವೆ. ಇದರ ಪರಿಣಾಮ ಹಿಮ್ಮೇಳದ ಅಗತ್ಯ ಹಾಗೂ ಮಹತ್ವ ಕಡಿಮೆಯಾಗಿದೆ. ತಾಳ, ದಪು, ಮುಖವೀಣೆ, ಶೃತಿಪೆಟ್ಟಿಗೆಗಳು ಅನಾಥವಾಗಿ ಮೂಲೆಗುಂಪಾಗ ತೊಡಗಿವೆ. ಅವುಗಳ ಸ್ಥಾನದಲ್ಲಿ ತಬಲ, ಹಾಮರ್ೋನಿಯಂ ಹಾಗೂ ಪೀಟೀಲುಗಳಂತಹ ಆಧುನಿಕ ವಾದ್ಯ ಪರಿಕರಗಳು ಬಾಯಾಡಿಸುತ್ತಿವೆ. ನಟರ ನಟನೆ, ಕುಣಿತ, ಹಾವಭಾವ ಪ್ರದರ್ಶನ, ಜಾನಪದೀಯ ಗತ್ತು ಗಮ್ಮತ್ತುಗಳು ಉಚ್ಚಾಟನೆಗೊಂಡು ಸಿನಿಮಾ ನಟರ ಅನುಕರಣೆ ಮೆರೆದು ಕೃತಕತೆ ಎದ್ದು ಕುಣಿದಿದೆ. ಬಣ್ಣ ತೆಳುವಾಗಿ ಬಿಟ್ಟಿದೆ. ಹೊಸ ಪ್ಯಾಷನ್ನಿನೊಂದಿಗೆ ಸೇರ್ಪಡೆಯಾಗಿರುವ ಕಪ್ಪು ಕನ್ನಡಕ ,ಕೈಗಡಿಯಾರಗಳು ಕಣ್ಣು ಮನಸ್ಸಿಗೆ ಕಿರಿಕಿಯನ್ನುಂಟು ಮಾಡುತ್ತಿವೆ.ಇವು ಕೃತಕತೆಯನ್ನು ಪೋಷಿಸಲು ಮತ್ತಷ್ಟು ಸಹಕಾರಿಯಾಗಿವೆ. ಇದನ್ನು ಸಹಿಸಿಕೊಂಡರೆ ಕೇಳಿಕೆ ಬದಲಾದ ಪರಿಸರ ಮನೋಭಾವಗಳ ನಡುವೆಯೂ ಹವ್ಯಾಸಿಗಳಿಂದಾಗಿ ಉಳಿದಿದೆ ಎಂಬುದರಿಂದಷ್ಟೆ ಸಮಾಧಾನ ಪಡಬೇಕಾಗಿದೆ. ಕಾಲಧರ್ಮಕ್ಕೆ ಅನುಗುಣವಾದ ಬದಲಾವಣೆ ತಪ್ಪಲ್ಲ. ಹಾಗೆಂದು ಪರಂಪರೆಯಿಂದ ದೂರ ಮಾಡಿ ಕೃತಕತೆಯ ಹಂದರದಲ್ಲಿ ನಲುಗುವುದು ಕ್ಷಮ್ಯವಲ್ಲ. ಮೂಲದ ರಂಗನ್ನೆ ತೊಳೆಯುವುದು ಪರಂಪರೆಗಷ್ಟೆ ಅಲ್ಲ ಮುಂದಿನ ಪೀಳಿಗೆಯನ್ನು ವಂಚಿಸಿದಂತೆಯೇ. ಇಂದು ಕೇಳಿಕೆಯ ಅನಪೇಕ್ಷಿತ ಬದಲಾವಣೆ ಅಥವಾ ಮಾಪರ್ಾಡಿಗೆ ಯಾವ ಶಾಸ್ತ್ರೀಯ ಸೈದ್ಧಾಂತಿಕ ಇಲ್ಲವೇ ಸಾಂಪ್ರದಾಯಿಕ ತಳಹದಿಯೂ ಇಲ್ಲವಾಗಿದೆ. ಮೂಲ ಕಲಾವಂತಿಕೆಯನ್ನು ಹಾಳು ಮಾಡುವ ಯಾವುದೇ 'ಆಧುನೀಕರಣ' ಪ್ರತಿಯೊಂದು ಸಾಂಪ್ರದಾಯಿಕ ಕಲೆಗೆ ಮಾರಕವೆಂದೇ ಹೇಳಬೇಕಾಗುತ್ತದೆ.
ತೊಗಲುಗೊಂಬೆಯಾಟ:
ತೊಗಲುಗೊಂಬೆಯಾಟ ಕೇಳಿಕೆಯ ಮತ್ತೊಂದು ಪ್ರಾಚೀನ ಜಾನಪದ ಕಲಾ ಪ್ರಕಾರವೇ ತೊಗಲುಗೊಂಬೆಯಾಟ. ಅವಸಾನದ ಅಂಚಿನಲ್ಲಿರುವ ಜನಪ್ರಿಯ ಜಾನಪದ ಪ್ರದರ್ಶನ ಕಲೆಗಳಲ್ಲಿ ಆದಿ ಸ್ಥಾನದಲ್ಲಿದೆ. ಚಲನಚಿತ್ರಗಳ ಕನಸೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಮನರಂಜನೆಯ ಕಾರಣದಿಂದ ಜನರ ಆದರಾಭಿಮಾನಗಳನ್ನುಗಳಿಸಿದ್ದ ಆಟವಿದು. ಗೊಂಬೆಗಳೊಂದಿಗೆ ಬಿಚ್ಚುತ್ತಿದ್ದ ಮಾಯಾಲೋಕ ಇಂದಿನ ಸಿನಿಮಾಗಳಷ್ಟೆ ರಂಗಿನ ಮೋಡಿಯದಾಗಿತ್ತು. ಕೇಳಿಕೆಯಂತೆಯೇ ತೊಗಲುಗೊಂಬೆಯಾಟ ಕಟ್ಟಿಸಿವಲ್ಲಿದ್ದ ಪುರುಷಾರ್ಥ ಅದ್ಬುತವಾದುದಾಗಿದೆ. ಮನರಂಜನೆ, ಧಾಮರ್ಿಕ ಆಶಯ ಹಾಗೂ ಸಮುದಾಯದ ಕಲ್ಯಾಣದ ಬಯಕೆ ಗೊಂಬೆಯಾಟದವರಿಗೆ ಹೊಟ್ಟೆಪಾಡಿನ ವೃತ್ತಿಯಷ್ಟೆ ಆಗಿರಲಿಲ್ಲ. ಜನಪರ ನಂಬಿಕೆ ಆಶಯಗಳು ಇವರದಾಗಿದ್ದವು.
ತೊಗಲುಗೊಂಬೆಯಾಟ ಏರಿದ ಎತ್ತರ ಎಷ್ಟು ಹೆಮ್ಮೆಯದೋ ಅದು ಕಂಡ ಪಾತಾಳ ಅಷ್ಟೇ ವಿಷಾದನೀಯ. ತೊಗಲುಗೊಂಬೆಯಾಟವೇ ಕುಲವೃತ್ತಿಯಾದ ಒಂದು ತಂಡ, ಸಂಪತ್ತು ಸಂಪನ್ನವಾಗದಿದ್ದರೂ ಹೊಟ್ಟೆ ಬಟ್ಟೆಗೆ ಪರದಾಡಿಸದೇ ದಿನ ನಡೆಸಿತ್ತು. ಹೊಸ ನೀರಾಗಿ ಬಂದ ಸಿನಿಮಾ ನಂತರ ದೂರದರ್ಶನ ಮತ್ತು ಇತರ ದೃಶ್ಯ ಮಾದ್ಯಮಗಳು ತೊಗಲುಗೊಂಬೆಯಾಟವನ್ನು ಅಣಕಿಸಿದವು. ಗೊಂಬೆಗಳು ಮೂಕವಾದವು. ಆಡಿಸುವ ಕೈಗಳು ಕುಣಿಸುವ ಕಾಲುಗಳು ಅಚಲವಾದವು. ಹಾಡುವ ಬಾಯಿ ಬರಿದಾಗಿ ನಿಟ್ಟುಸಿರು ಹೊರಬಿತ್ತು. ಆದರೆ ಜನ ಮನಸ್ಸು ಕೇಳಿಕೆಯ ಗುಂಗಿನಿಂದ ದೂರವಾಗಿರಲ್ಲಿಲ್ಲ. ಒಲ್ಲದ ಮನಸ್ಸಿನಿಂದ ತಂಡ ತೊಗಲುಗೊಂಬೆಗಳನ್ನು ಮೂಟೆಕಟ್ಟಿ ಆ ಪ್ರಸಂಗವನ್ನೆ ಮಾರ್ಪಡಿಸಿ ಬಣ್ಣ ಃಚ್ಚಿ ಪರದೆಯ ಮುಂದಕ್ಕೆ ಬಂದರು. ಅಗತ್ಯಕ್ಕೆ ಗೊಂಬೆಗಳು ಹಣವಾಗಿ ಮಾರ್ಪಟ್ಟಿತು. ಕಾಲಗತಿಯಲ್ಲಿ ಜನರ ಆಕರ್ಷಣೆಗೆ ಕೇಳಿಕೆಗಳು ಒಳಗಾದಾಗ ತಂಡಕ್ಕೆ ಬೇರೆ ದಾರಿ ಕಾಣದೆ ಬದುಕು ಮಾರ್ಗಗಳನ್ನು ಹುಡುಕುವುದು ಅನಿವಾರ್ಯವಾಯಿತು.ತಂಡ ಒಡೆಯಿತು. ಕೆಲವರು ಕೃಷಿ ಕಾಮರ್ಿಕರಾದರೆ ಕೆಲವರು ರಿಕಾಡರ್ುಡ್ಯಾನ್ಸು ಕಲಿತು ಜಾತ್ರೆ-ಉತ್ಸವಗಳಲ್ಲಿ ಕುಣಿದು ದಣಿದರು.ಇದೂ ತುಂಬಾ ದಿನ ಸಾಗಲಿಲ್ಲ; ಹೊಟ್ಟೆ ತುಂಬಲ್ಲಿಲ್ಲ. ಅವರಿಗೆ ತೋಚಿದ ವೃತ್ತಿಗಳನ್ನು ಅವಲಂಭಸಿದರು. ಇನ್ನೂ ಹಲವರು ಏನೂ ಮಾಡಲು ಮನಸ್ಸು ಒಪ್ಪದವರು ನಿರಾಸೆಯ ಬುತ್ತಿ ಎದೆಗೊತ್ತಿ ಗೊಂಬೆಗಳೊಂದಿಗಿನ ಬದುಕನ್ನು ಪ್ರೀತಿಸಿದರು.ಭವಿಷ್ಯದ ಕನಸು ಫಲ ನೀಡೀತೆಂದು ಹಂಬಲಿಸಿದ್ದರಿಂದ ತೊಗಲುಗೊಂಬೆ ಉಳಿದುಕೊಂಡಿತು. ಹೀಗೆ ಉಳಿದುಕೊಂಡ ಈ ಕಲೆ-ಕಲಾವಿದ, ನವನಾಗರಿಕವೆಂದು ಬೀಗುವ ಆಧುನಿಕ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಕಪಿ ಮುಷ್ಠಿಗೆ ಸಿಲುಕಿ ನರುಳುತ್ತಿವೆ. ಇಂಥ ವಂಚನೆಯ ನಡುವೆಯೂ ಯಾವುದೋ ಯುಗದ ನಿಗೂಢ ಕನಸುಗಳನ್ನು ಬಿಚ್ಚಿಡುತ್ತ ಚಿಂದಿ ಬದುಕು ತುಂಬಿದ ವೇದನೆಯನ್ನು ನುಂಗಿಕೊಂಡು ಗೊಂಬೆಗಳಿಗೆ ಮಾತುಕೊಟ್ಟು ರಂಜಿಸುತ್ತಿದ್ದಾರೆ. ನಿಶ್ಚಿತ ನಾಳೆಯ ಅನಿಶ್ಚಿತ ಬದುಕನ್ನು ನಡೆಸುವ ದಾರಿಯನ್ನು ಹುಡುಕ್ಕುತ್ತಾ, ಬರಿಗೈಯ ಅಜೀವಗಳ ನರಳುವಿಕೆ ನಮ್ಮನ್ನು ನಾಚಿಸುತ್ತಿದೆ. ಕನಿಷ್ಟ ಅವರ ವೇದನೆಯನ್ನು ಎದೆಯ ಹತ್ತಿರಕ್ಕೆ ತಂದುಕೊಳ್ಳುವಂತಾದರೆ, ಕಲೆ-ಕಲಾವಿದರಿಗೆ ಅವರ ಬಾಳಿಗೆ ನವಚೈತನ್ಯದ ಕಿರಣವಾದರೂ ಕಂಡೀತು. ಬುರ್ರಕಥೆ ಪ್ರಸ್ತುತ ಅನೇಕ ಕಲೆಗಳು ಹೊಸ ಪೀಳಿಗೆಯ ಅವಕೃಪೆಗೆ ಒಳಗಾಗ ತೊಡಗಿದ್ದು ಆಧುನಿಕ ಮನರಂಜನಾ ಸಾಧನಗಳ ಪ್ರವೇಶದಿಂದ ಎಂದು ಹೇಳಬಹುದು. ಜನಪದರಿಗೆ ಇವುಗಳಲ್ಲಿ ಕಂಡ ಥ್ರಿಲ್ ಜಾನಪದ ಕಲೆಗಳಲ್ಲಿ ಕಾಣಲಿಲ್ಲ. ಕಲಾರೂಪಗಳ ಬಗ್ಗೆ ಮೂಲಭೂತ ಒಲವು ಇಲ್ಲದರ ಕಾರಣದಿಂದ ಅವು ತೀವತರ ನಿರ್ಲಷ್ಯಕ್ಕೆ ಒಳಪಟ್ಟವು. ಜಾಗತೀಕರಣದ ಈ ಸಂದರ್ಭದಲ್ಲಿ ಇವುಗಳ ರಕ್ಷಣೆ ಮತ್ತು ಪೋಷಣೆ ಹಿಂದೆಂದಿಗಿಂತಲೂ ಈಗ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಹೃದಯರು, ಅಕಾಡೆಮಿಗಳು,ವಿಶ್ವವಿದ್ಯಾಲಯಗಳು,ಸಕರ್ಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಇವುಗಳ ಆಶ್ರದಾತರಾಗಬೇಕಾಗಿದೆ. ಮುಂದಿನ ತಲೆಮಾರಿಗೆ ಭವ್ಯ ಜಾನಪದ ಪರಂಪರೆಯ ಕಲಾಸಿರಿಯನ್ನು ಉಳಿಸಲು ನಾವೆಲ್ಲಾ ಇಂದು ಸಕ್ರಿಯರಾಗಬೇಕಾದ ಅನಿವಾರ್ಯತೆ ಇದೆ.
-ಜಿ.ಶ್ರೀನಿವಾಸಯ್ಯ.

ಅಕ್ಕಂದಿರಿಗೆ ಪಚ್ಚೆಯಿಡುವ ದ್ರಾವಿಡ ಆಚರಣೆ :

ಮನುಷ್ಯರನ್ನು ಭೂತಗಳು ಕ್ಷುದ್ರದೇವತೆಗಳು ಕಾಡಿ ಹಿಂಸಿಸುವುದು ಜನಪದರಲ್ಲಿ ಸಾಮಾನ್ಯ, ಅಂತಹ ಕ್ಷುದ್ರದೇವತೆಗಳಿಗೆ ಮನುಷ್ಯರು ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಅಗ್ಗರ್ಲು. ಅಗ್ಗಾರ್ಲು, ಅಗ್ಗಾರು, ಮುಂತಾದ ಹೆಸರುಗಳಿಂದ ಕರೆಯುವರು. ಈ ಅಗ್ಗಾರ್ಲು ಎನ್ನುವುದು 'ಅಕ್ಕಗಾರು' ಎಂಬುದರ ಜಾನಪದ ರೂಪ. ತೆಲುಗಿನಲ್ಲಿ ಅಕ್ಕಗಾರು ಎಂದರೆ ಅಕ್ಕನವರು ಎಂದು. ಹಾಗಾದರೆ ಆ ಅಕ್ಕನವರಾರು? ಎಂಬ ಪ್ರಶ್ನೆ ಮೂಡುತ್ತದೆ. ಸಪ್ತ ಮಾತೃಕೆಯರನ್ನು ಏಳು ಜನ ಅಕ್ಕನವರೆಂದು ಕರೆಯುವರು. ಅಲ್ಲದೆ ಇವರನ್ನು ಜಕ್ಕಿಣಿಯರೆಂದು ಕರೆಯುವರು. ಪ್ರತಿ ಗ್ರಾಮದ ಹೊರಭಾಗದಲ್ಲಿ ನೇರಳೆ. ಮಾವು, ಆಲ ಮತ್ತು ಬೇವಿನ ಗುಂಡು ತೋಪುಗಳಲ್ಲಿ ಈ ಅಕ್ಕನವರು ನೆಲೆಸಿರುತ್ತವೆಂದು ಜನ ಭಾವಿಸುತ್ತಾರೆ. ಅಂತಹ ಸ್ಥಳಗಳಲ್ಲಿ ಜನ ಸಂಚಾರ ಕಡಿಮೆಯಿರುತ್ತದೆ. ಅಲ್ಲಿಗೆ ಯಾರೂ ಹೋಗುವುದಿಲ್ಲ.

ಇಂತಹ ಸ್ಥಳಗಳಲ್ಲಿ ಸಮಯವಲ್ಲದ ಸಮಯದಲ್ಲಿ ಓಡಾಡಿದಾಗ ಅಕ್ಕಗಾರು ಗಾಳಿ ಸೋಕಿದರೆ ವ್ಯಕ್ತಿಯು ಅಸ್ವಸ್ಥನಾಗುವನು. ಅಗ್ಗಾರ್ಲುವಿನಲ್ಲಿ ಎರಡು ವಿಧವಿರುತ್ತದೆ. ಒಂದು ಅಗ್ಗಾರ್ಲು ಮತ್ತೊಂದು ಮುನೇಶ್ವರ. ಇವು ಸಾಮಾನ್ಯವಾಗಿ ನಡು ಮಧ್ಯಾಹ್ನದ ಹೊತ್ತಿನಲ್ಲಿ ಆಗಸದಲ್ಲಿ ಓಡಾಡುತ್ತವೆಂದು, ಏಕಾಂಗಿಯಾಗಿ ಓಡಾಡುವವರನ್ನು, ತಮಗೆ ಬೇಕಾದವರನ್ನು ಹಿಡಿದು ಹಿಂಸಿಸುತ್ತವೆಂದು ನಂಬಿಕೆ. ಇವೆರಡನ್ನು ಕ್ಷುದ್ರದೇವತೆಗಳ ಗುಂಪಿನಲ್ಲಿ ಗುರ್ತಿಸಲಾಗುತ್ತದೆ.
ತೀವ್ರತರವಾದ ಜ್ವರವು. ಕೈಕಾಲುನೋವು, ಕಣ್ಣುರಿ, ವಾಂತೀ ಭೇದಿ ಕಾಣಿಸಿಕೊಳ್ಳುವುದು. ಯಾವುದೇ ಔಷಧಿಗೂ ಅದು ವಾಸಿಯಾಗುವುದಿಲ್ಲ. ಆಗ ತಿಳಿದಿರುವವರು ಅಗ್ಗಾರ್ಲು ಸೋಕಿರಬಹುದು ಆಯಮ್ಮನಿಗೆ 'ಮೀದು' ಕಟ್ಟಿಯೆಂದು ಹೇಳುವರು.

ಮುಗ್ಧವಾದ ಮದುವೆಯಾಗದ ಹುಡುಗನನ್ನು ಕರೆಯುವರು. ಅವನಿಗೆ ಮೂರು ಪ್ರಕಾರದ ದಾನ್ಯಗಳನ್ನು, ಒಂದು ಅರಿಶಿನದ ಕೊಂಬನ್ನು, ಒಂದು ತಂಬಿಗೆಯನ್ನು ಊದುಬತ್ತಿಯನ್ನು ಕೊಟ್ಟು ಹತ್ತಿರದ ಬಾವಿಗೋ ಆಥವಾ ಕುಂಟೆಯ ಹತ್ತಿರ ಕಳಿಸುವರು. ಅವನು ಆ ಬಾವಿ ಅಥವಾ ಕುಂಟೆಯಲ್ಲಿ ಕೈಕಾಲು ಮುಖ ತೊಳೆದುಕೊಳ್ಳುವನು. ತಂಬಿಗೆಯನ್ನು ತೊಳೆಯುವನು. ಆ ತಂಬಿಗೆಯ ತುಂಬಾ ನೀರನು ತೆಗೆದುಕೊಳ್ಳುವನು. ಅಲ್ಲೆ ಕಲ್ಲಿನ ಮೇಲೆ ಅರಿಶಿನವನ್ನು ಉಜ್ಜಿ ಗಂಧ ತೆಗೆದು ಒಂದು ಬಿಳಿ ಬಟ್ಟೆಯನ್ನು ಹಳದಿಗೊಳಿಸುವನು. ಅದರಲ್ಲಿ ಮೂರು ಪ್ರಕಾರದ ದಾನ್ಯಗಳನ್ನು ಹಾಕಿಕಟ್ಟುವನು. ಅದನ್ನು ತಂಬಿಗೆಯ ಬಾಯಿಗೆ ಕಟ್ಟಿ ಊದುಬತ್ತಿ ಉರಿಸಿ ಪೂಜಿಸುವನು. ಅವರ ಮನೆದೇವರಿಗೆ, ಅಕ್ಕನರನ್ನು ಕುರಿತು ಪೂಜಿಸುವನು. ಹರಕೆಯನ್ನು ಹೊತ್ತುಕೊಳ್ಳುವನು. ಅಲ್ಲಿಂದ ಯಾರನ್ನೂ ಮಾತನಾಡದೆ ನೇರವಾಗಿ ಮನೆಗೆ ಬರುವನು. ರೋಗಿಯು ಹೆಂಗಸಾಗಿದ್ದರೆ ಎಡಗೈಗೂ, ಗಂಡಸಾಗಿದ್ದರೆ ಬಲಗೈಗೂ ಆ ಮೀದನ್ನು ಆಕಾಶ ಭೂಮಿಗೂ ನೀವಳಿಸಿ ಕಟ್ಟುವನು. ಆ ತಂಬಿಗೆಯಲ್ಲಿನ ನೀರನ್ನು ಮೂರು ಸಾರಿ ಕುಡಿಸುವನು, ನಿಜವಾದ ಅಕ್ಕನವರಾಗಿದ್ದರೇ ಆ ಮೀದು ಕೆಂಪು ಬಣ್ಣಕ್ಕೆ ಬರುತ್ತದೆ. ಆ ಮೀದಿನ ಕೆಂಪು ಬಣ್ಣವನ್ನನುಸರಿಸಿ ಅಕ್ಕನವರ ತೀವ್ರತೆಯನ್ನು ಜನ ನಂಬುತ್ತಿದ್ದರು.

ಒಂದು ವೇಳೆ ರೋಗಿಯು ಗುಣಮುಖನಾಗದಿದ್ದರೆ ಹತ್ತಿರದ ಕೊರವಂಜಿಯನ್ನು 'ಸಗಿಣ' (ಕಣಿ)ಕೇಳಲು ಭೇಟಿಯಾಗುತ್ತಿದ್ದರು. ಇಲ್ಲವೆ ಸಂತೆಯಲ್ಲಿ ಕೊರವಂಜಿಯ ಹತ್ತಿರ 'ಗೆದ್ದಿ' ಕೇಳುತ್ತಿದ್ದರು. ಆ ಕೊರವಂಜಿ ಧಾನ್ಯಗಳನ್ನು ಮುಟ್ಟಿ ರಾಗಬದ್ಧವಾಗಿ ಇಂತಹ ದಿಕ್ಕಿನಲ್ಲೇ ಇಂತಹ ಸಮಯದಲ್ಲೇ ಎಂದು ತಿಳಿಸುವಳು. ಅಲ್ಲದೆ ಪೀಡಿಸುತ್ತಿರುವದು ಅಕ್ಕನವರೇ, ಜಕ್ಕಿಣಿಯೇ ಭೂತ-ಪ್ರೇತವೇ, ಅದು ಎಂತಹ ಅಕ್ಕನವರು ಎಂಬುದನ್ನು ತಿಳಿಸುತ್ತಾಳೆ. ಅಲ್ಲದೆ ಪರಿಹಾರವನ್ನು ಹೇಳುತ್ತಾಳೆ.
ಅಕ್ಕಗಾರು ಹಿಡಿದಿದ್ದರೆ ಎರಡು ಕಾಲಿನ ಪ್ರಾಣಿಯನ್ನು ಬಲಿ ನೀಡುವಂತೆಯೂ ಮುನೇಶ್ವರನು ಹಿಡಿದಿದ್ದರೆ ನಾಲ್ಕು ಕಾಲಿನ ಪ್ರಾಣಿಯನ್ನು 'ಪಚ್ಚೆಯಿಟ್ಟು' ಬಲಿ ನೀಡಬೇಕೆಂದು ತಿಳಿಸುತ್ತಾಳೆ. ಅಲ್ಲದೆ ಯಾವ ವಾರ, ಯಾವ ಸ್ಥಳದಲ್ಲಿ ಹಚ್ಚೆಯಿಡಬೇಕು ಎಂಬುದನ್ನು ತಿಳಿಸುತ್ತಾಳೆ.

ಅಕ್ಕಗಾರು ಅಂದರೇ ಕುಂಬಾರನು ಮಾಡಿರುವ ಅಲಂಕಾರಮಯ ಕುದುರೆಗಳನ್ನು ಇಂತಹ ಗುಂಡು ತೋಪುಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲ್ಪಟ್ಟಿರುತ್ತದೆ. ಅಂತಹ ಕಡೆ ರೋಗಿಯು ಕೊರವಂಜಿ ಹೇಳಿದ ದಿನದಂದು ಹೋಗಿ ಹಚ್ಚೆ ಸಾಮಾನುಗಳೊಂದಿಗೆ ಹೆಡಿಗೆಯನ್ನು ಹೊತ್ತು ತರುವ ವಾಡಿಕೆಯಿದೆ. ಅಲ್ಲದೆ ಕೈಯಾರೆ ಅಮದನ್ನು ಮತ್ತು ಅಮದಿನ ಎಲೆಯನ್ನು ತಯಾರಿಸಿ ಆಕೆಯನ್ನು ಪೂಜಿಸಿ ಬಲಿ ನೀಡಿ ಬರುವರು.

ರೋಗಿ ಮತ್ತು ಜೊತೆಗೊಬ್ಬರು ನಡೆಸುವ ಪೂಜಾ ಕಾರ್ಯ ಮತ್ತೊಂದಿದೆ. ಕೆಲವರು ಹೊಳೆ ಅಥವಾ ಕುಂಟೆಯ ರೇವಿನಲ್ಲಿ ಈ ದ್ಯಾವರನ್ನು ಮಾಡುತ್ತಾರೆ. 'ಓವಿಳಾಕು'(ಎಕ್ಕಲಸೊಪ್ಪು)ವಿನಿಂದ ಚಪ್ಪರ ಹಾಕಿ, ಗುಡಿಗಟ್ಟಿ ಅದರಲ್ಲಿ ಏಳು ಕಲ್ಲುಗಳನ್ನಿಡುವರು. ಅಲ್ಲಿಗೆ ಪಚ್ಚೆ ಸಾಮಾನುಗಳನ್ನೂ ದವಸ ಧಾನ್ಯಗಳನ್ನೂ ಹೆಡಿಗೆಯಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲಿಯೇ ಒಲೆಯಿಟ್ಟು 'ಅಮದನ್ನ'(ನೈವೇಧ್ಯ) ಮಾಡಿ. ಪಚ್ಚೆ ಸಾಮಾನುಗಳಿಂದ ದೇವರನ್ನು ಪೂಜಿಸುವರು. ಏಳು ನಿಂಬೆ ಹಣ್ಣುಗಳನ್ನು, ಗಾಜೂ, ಓಲೆಗರಿಯನ್ನಿಟ್ಟು ಕೋಳಿಯನ್ನು ಕೊಯ್ಯುವರು. ಅದರ ರಕ್ತವನ್ನು ಅಮದಿನ್ನಕ್ಕೆ ಸುರಿದು ದ್ಯಾವರಿಗೆ ನಮಸ್ಕರಿಸಿ ಮನೆಗೆ ಬರುವರು. ಅನಂತರ ಕಾಯಿಲೆ ವಾಸಿಯಾಗುವುದು. ಒಂದು ವೇಳೆ ಈ ರೀತಿ ಮಾಡದಿದ್ದರೆ ವ್ಯಕ್ತಿಯು ಕ್ಷೀಣಿಸುತ್ತಾ ಒಂದು ದಿನ ಸಾಯುತ್ತಾನೆ ಎಂಬುದು ಜನರ ನಂಬಿಕೆ..
ಈ ಮೇಲಿನ ಆಚರಣೆಯು ಅಪ್ಪಟ ದ್ರಾವಿಡ ಸಂಸ್ಕೃತಿಯ ಮಾತೃದೇವತಾ ಆರಾಧನೆಯ ಪಳಿಯುಳಿಕೆಯಂತೆ ಇಂದಿಗೂ ಆಚರಣೆಯಲ್ಲಿದೆ
- ಜಿ.ಶ್ರೀನಿವಾಸಯ್ಯ

ಜನಪದ ಚಿತ್ತಾರಗಳು

ಹಚ್ಚೆಗಳು,ರಂಗೋಲಿಗಳು :
ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಕಲಾತ್ಮಕತೆಯಿರುತ್ತದೆ. ಆ ಕಲಾತ್ಮಕತೆಯನ್ನು ಆಸ್ವಾದಿಸುವ ಮನಸ್ಥಿತಿ ಬೇಕು. ಅಂತಹ ಕಲಾಕೃತಿಗಳನ್ನು ಸೃಜಿಸುವ ಸೃಜನಶೀಲ ಶಕ್ತಿಯನ್ನು ಆದಿಮಾನವನಿಂದ ಆಧುನಿಕ ಮಾನವನ ತನಕ ಕಾಣುತ್ತೇವೆ.
ಪ್ರಾಚೀನ ಮಾನವನ ಇಂತಹ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯನ್ನು ಅವನು ಗುಡ್ಡ ಮತ್ತು ಬಂಡೆಯ ಮೇಲೆ ಬರೆಯುತ್ತಿದ್ದ ಚಿತ್ತಾರಗಳಲ್ಲಿ ಕಾಣಬಹುದು. ಅಲ್ಲಿಂದ ಆದಿಗೊಂಡು ಅವನು ಅನೇಕ ಘಟ್ಟಗಳಲ್ಲಿ ಸಾಗಿ ಬರುತ್ತಲೇ ಅವನ್ನು ಮುಂದುವರಿಸಿಕೊಂಡು ಬಂದಿದ್ದಾನೆ. ಅಂತಹ ಚಿತ್ರಗಳನ್ನು ನಾವು ಇಂದಿಗೂ ಗುಹೆ ಮತ್ತು ಬಂಡೆಗಲ್ಲುಗಳ ಮೇಲೆ ಕಾಣಬಹುದಾಗಿದೆ. ಅಲ್ಲದೆ ಆಧುನಿಕ ಕಾಲದಲ್ಲಿಯೂ ಅನೇಕ ಬಗೆಯ ಚಿತ್ತಾರಗಳನ್ನು ಕಾಣಬಹುದಾಗಿದೆ. ಆದ್ದರಿಂದ ಆದಿ ಮಾನವನಿಂದ ಆಧುನಿಕ ಮಾನವನ ತನಕ ಅವನ ಕಲಾತ್ಮಕತೆಯನ್ನು ಅವುಗಳಿಗೆ ಬಳಸಿಕೊಂಡಿರುವ ಮಾಧ್ಯಮಗಳನ್ನು ಜನಪದ ಚಿತ್ತಾರಗಳ ಹಿನ್ನೆಲೆಯಲ್ಲಿ ನೋಡಬಹುದು.
ಹಚ್ಚೆ ಕಲೆಮನುಷ್ಯರೊಂದಿಗೆ ಶಾಶ್ವತವಾಗಿ ಬರುವಂತಹ ಏಕೈಕ ಆಸ್ತಿಯೆಂದು ಕರೆಯುವ ಹಚ್ಚೆಯೂ ಜನಪದ ಕಲೆಗಳಲ್ಲಿ ಮುಖ್ಯವಾದುದಾಗಿದೆ. ಇದು ಮನುಷ್ಯನ ಬದುಕಿನುದ್ದಕ್ಕೂ ಜೊತೆಜೊತೆಯಾಗಿ ಧಾರ್ಮಿಕ ಹಿನ್ನಲೆಯೊಂದಿಗೆ ಬೆಳೆದು ಬರುತ್ತಿರುವ ಕಲೆ ಎನ್ನಬಹುದು. ಮುತ್ತೈದೆಯರ ಸೌಂದರ್ಯದ ಸಂಕೇತವಾಗಿ ಮಾನವನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿದಂದಿನಿಂದ ವೈವಿಧ್ಯಮಯವಾಗಿ ಇದು ಜೊತೆಗೂಡಿ ಬರುತ್ತಲೇ ಇದೆ. ಹಿಂದು ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆಗೆ ತುಂಬಾ ಗೌರವವಿದೆ.ಹಚ್ಚಕಲೆ ಜಾತಿ ಮತ್ತು ಜನಾಂಗಿಕವಾಗಿ ವೈವಿಧ್ಯತೆಯನ್ನು ಪಡೆಯುತ್ತಾ ಹೋಗುತ್ತದೆ. ಅನ್ಯ ಜಾತಿಗಳಲ್ಲಿ ಹಚ್ಚೆಯನ್ನು ಹಾಕಿಸಿಕೊಳ್ಳುವುದು ಕಡಿಮೆ. ಹಾಕಿಸಿಕೊಂಡರೂ ಕೆಲವೊಂದು ಚಿತ್ರ ವಿನ್ಯಾಸಗಳನ್ನು ಹಾಕಿಸಿಕೊಳ್ಳುವುದುಂಟು. ವೈಷ್ಣವರು ಚಕ್ರಾಂಕನ, ಶೈವರಾದರೆ `ತ್ರಿಪುಂಡ್ರ', 'ತ್ರಿಶೂಲ', ಲಿಂಗ, ಬಸವ, ನಂದಿ, ಧ್ವಜದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಕ್ರೈಸ್ತರು ಶಿಲುಬೆ, ಪಕ್ಷಿಯನ್ನು ಹಾಕಿಸಿಕೊಳ್ಳುತ್ತಾರೆ. ಇತರೆ ಜನಾಂಗಗಳು ಆಂಜನೇಯ ಮುಂತಾದ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಾರೆ.ಹಚ್ಚೆ ಸೌಂದರ್ಯದ ಸಂಕೇತ, ಅದು ನಮ್ಮ ಜೊತೆಯಲ್ಲಿ ಬರುತ್ತದೆ, ಅದನ್ನು ಹಾಕಿಸಿರುವವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ.ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಜನಪದರು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಅವುಗಳನ್ನು ಹಾಕುವ ಸ್ಥಳಗಳನ್ನು ಕೆಳಕಂಡಂತೆ ನೀಡಬಹುದು.
ಹಣೆಯ ಮೇಲಿನ ಹಚ್ಚೆಹಣೆಯ ಮೇಲಿನ ಹಚ್ಚೆಯ ಕಲೆಗಳನ್ನು ಗುಮ್ಮಡಿಗಿಂಜ (ಕುಂಬಳ ಬೀಜ) ಚಂದ್ರಮ (ಚಂದ್ರ) ಸೂರ್ಯ (ಸೂರ್ಯ) ನಿಲುವನಾಮು(ಉದ್ದನೆಯ ನಾಮ) -ಇತ್ಯಾದಿಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ನಿಲುವನಾಮವನ್ನು ಗಂಡಸರು ಹಾಕಿಸಿಕೊಳ್ಳುವುದುಂಟು. ಉಳಿದಂತೆ ಬಹುತೇಕ ಮುಖದ ಮೇಲಿನ ಹಚ್ಚೆ ಚಿತ್ತಾರಗಳನ್ನು ಹೆಂಗಸರು ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ತಳ ಸಮುದಾಯದ ಜನರಲ್ಲಿ ಕಡ್ಡಾಯವಾಗಿ ಹಾಕಿಸಿಕೊಳ್ಳುತ್ತಾರೆ.ಮುಂಗೈ ಮೇಲಿನ ಹಚ್ಚೆಗಳುಗಂಡಸರು ಹಾಗೂ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆಗಳಲ್ಲಿ ಶ್ರೀಕೃಷ್ಣನ ತೊಟ್ಟಿಲು. ಮುತ್ಯಾಲಮುಗ್ಗು, ಆಂಜನೇಯ, ಮಲ್ಲಿಮೊಗ್ಗೆ. ಮುತ್ಯಾಲ ಆರತಿ. ಜಾಕಾಯಿಪೆಟ್ಟಿಗೆ. ಪಗಬಂಡಿ. ಶ್ರೀರಾಮುಲು ತೊಟ್ಲಿ (ಶ್ರೀರಾಮನ ತೊಟ್ಟಿಲು), ಮುಂಗೈಯ ಎದುರಿಗೆ ಹಾಕಿಸಿಕೊಳ್ಳುವ ಎದುರು ಬಾಸಿಂಗಾಲು (ಎದುರು ಬಾಸಿಂಗಗಳು) -ಇತ್ಯಾದಿ ಕೈ ಮತ್ತು ಬೆರಳುಗಳ ಮೇಲಿನ ಹಚ್ಚೆಗಳುವಿಶೇಷವಾಗಿ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆ ಚಿತ್ತಾರಗಳಲ್ಲಿ ಪೊಯ್ಯಿಗುಂಡ್ಲು (ಒಲೆಗುಂಡುಗಳು) ಮೊಲ್ಲಿಮೊಗ್ಗ (ಮಲ್ಲಿಗೆ ಮೊಗ್ಗು) ಸ್ಯಾಪಮುಳ್ಳು (ಮೀನಿನ ಮುಳ್ಳು) ಇತ್ಯಾದಿ ಪ್ರಕಾರಗಳು ಪ್ರಮುಖವಾದವುಗಳು.ಆಧುನಿಕತೆಯ ಅಬ್ಬರದಲ್ಲಿ ದೇಸಿ ಹಚ್ಚೆಕಲೆ ತನ್ನ ಸಾಚಾತನವನ್ನು ಕಳೆದುಕೊಳ್ಳುತ್ತಿದೆ. ದೇಸಿ ಹಚ್ಚೆಕಲೆಯ ಸ್ಥಾನವನ್ನು ಆಧುನಿಕ ಯಾಂತ್ರಿಕ ಹಚ್ಚೆ ಕಲೆ ಕಬಳಿಸುತ್ತಿದೆ. ಇದರಿಂದ ಪರಂಪರಾಗತ ಜನಪದ ಚಿತ್ತಾರಗಳು ಅವನತಿಯ ಹಂಚಿಗೆ ಬಂದು ತಲುಪಿವೆ.ರಂಗೋಲಿ ಜನಪದರು ತಮ್ಮ ಪರಿಸರದಲ್ಲಿ ನೋಡುವ ವಸ್ತು, ಪ್ರಾಣಿಗಳನ್ನು ತಮ್ಮ ಮನೆಯ ಗೋಡೆಗಳ ಮೇಲೆ, ಪಡಸಾಲೆಯಲ್ಲಿ. ನಡುಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದರು. ಅದಕ್ಕೆ ಅವರು ಮನೆಗಳನ್ನು ಕೆಮ್ಮಣ್ಣಿನಿಂದ ಅಲಂಕರಿಸಿ, ಅದರ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ವಿವಿಧ ಬಗೆಯ ಚಿತ್ರಗಳನ್ನು ಬರೆಯುತ್ತಿದ್ದರು. ಕೆಲವರು ಬಿಳಿ ಗೋಡೆಗಳಿಗೆ ನೀಲಿಯಿಂದ ಚಿತ್ತಾರಗಳನ್ನು ಬರೆಯಿತ್ತಿರುವುದನ್ನು ಕಾಣಬಹುದು. ನಡುಮನೆಯಲ್ಲಿ ಮಣ್ಣಿನಿಂದಲೇ ನವಿಲು, ಸೂರ್ಯ, ಚಂದ್ರ ಮತ್ತು ಇತರೆ ಪ್ರಾಣಿಗಳನ್ನು ಮಾಡುತ್ತಿದ್ದುದು ಮತ್ತು ಬರೆಯುತ್ತಿದ್ದುದು ಅವರ ಕಲಾವಂತಿಕೆಯನ್ನು ಸೂಚಿಸುತ್ತದೆ. ಇಂದಿಗೂ ಇವರ ಮನೆಗಳಲ್ಲಿ ವಿವಾಹ ಮತ್ತು ಇತರೆ ಕೆಲವು ವಿಶೇಷ ದಿನಗಳಲ್ಲಿ ಇಂತಹ ಚಿತ್ತಾರಗಳನ್ನು ಬರೆಯುತ್ತಾರೆ. ಭಾರತದಲ್ಲಿ ರಂಗವಲ್ಲಿಯೂ ಪುರಾತನ ಕಾಲದಿಂದಲೂ ಬಂದ ಗೃಹಾಲಂಕಾರದ ಒಂದು ಕಲೆಯಾಗಿದೆ. ಪುರಾಣ, ಕಾವ್ಯ, ಇತಿಹಾಸ ಮೊದಲಾದ ಸಾಹಿತ್ಯಗಳಲ್ಲಿ ರಂಗವಲ್ಲಿಯ ಉಲ್ಲೇಖಗಳಿವೆ. ಅರವತ್ನಾಲ್ಕು ಕಲೆಗಳಲ್ಲಿ ರಂಗವಲ್ಲಿಯೂ ಒಂದಾಗಿದೆ.ಮನೆಯನ್ನು ಸಾರಿಸುವ ಸಂದರ್ಭದಲ್ಲೂ ಸಗಣಿಯನ್ನು ಕಲಾತ್ಮಕವಾಗಿ ಸಾರಿಸುತ್ತಾರೆ. ಅದರ ಮೇಲೆ ಸುದ್ದೆ ಮಣ್ಣಿನಿಂದ ರಂಗೋಲಿ ಬಿಡಿಸುವುದು, ಆ ಮುಗ್ಗಿಗೆ ಎರೆಮಣ್ಣಿನಿಂದ ಅಡ್ಡಪಟ್ಟಿ ತೆಗೆಯುವುದು. ಹೂವು ಕಾಯಿಗಳನ್ನು ರಂಗೋಲಿಯಲ್ಲಿ ಬಿಡಿಸುವುದು ರೂಢಿಯಲ್ಲಿದೆ. ಹುಣ್ಣಿಮೆಯ ದಿನಗಳಲ್ಲಿ ಹಾಕುವ ಕಲಾತ್ಮಕ ರಂಗೋಲಿಗಳನ್ನು ಕಾಣುತ್ತೇವೆ. ಇವು ಹೆಂಗಳೆಯರ ಕಲಾಸಿರಿಯನ್ನು ಪ್ರತಿನಿಧಿಸುವಂತಹವುಗಳು ಆಗಿವೆ.ಮದುವೆಯ ಸಂದರ್ಭದಲ್ಲಿ ಹೆಂಗಸರ ಮತ್ತು ಗಂಡಸರ ಕಲಾಸಿರಿಯ ಅಭಿವ್ಯಕ್ತಿಯನ್ನು ವಿಶೇಷವಾಗಿ ಕಾಣುತ್ತೇವೆ. ಮನೆಯ ಹೆಬ್ಬಾಗಿಲಿನ ಬಲಗಡೆ ಮದುಮಕ್ಕಳು ಕುಳಿತುಕೊಳ್ಳುವ ಭಾಗವನ್ನು ಕೆಮ್ಮಣ್ಣು ಮತ್ತು ಸುಣ್ಣಗಳಿಂದ ವಿವಿಧ ಆಕೃತಿಯ ಚಿತ್ತಾರಗಳನ್ನು ಬಿಡಿಸಿ ಅಲಂಕರಿಸಲಾಗುತ್ತದೆ. ಅಲ್ಲಿ ವಿಶೇಷವಾಗಿ ಪ್ರಕೃತಿ ದೇವರುಗಳಾದ ಸೂರ್ಯ, ಚಂದ್ರ ಮುಂತಾದವುಗಳನ್ನು ಬಿಡಿಸುತ್ತಿದರು. ಆದರೆ ಈಗ ಆಧುನಿಕ ಮದುವೆಯ ಏರ್ಪಾಟುಗಳು, ಇವುಗಳನ್ನು ಮರೆಯುವಂತೆ ಮಾಡಿವೆ.ಮನೆಯಲ್ಲಿ ಗೋಡೆಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ, ಮನೆಯ ಬಾಗಿಲಿಗೆ ಹಾಕುವ ಕಸೂತಿ ಕಲೆಗಳು, ಅವುಗಳ ಮೇಲೆ ಬಿಡಿಸುವ ವಿಭಿನ್ನ ಚಿತ್ತಾರಗಳು, ಗೋಡೆಯ ಅಂಚುಗಳ ಮೇಲಿನ ಕಲೆ ಮತ್ತು ಸ್ತ್ರೀಯರು ಹಾಕಿಕೊಳ್ಳುವ ಮೇಂದಿಯ ವಿವಿಧ ಬಗೆಯ ಚಿತ್ತಾರಗಳು ಅವರ ಕಲಾಭಿರುಚಿಯ ಸಂಕೇತವೆಂದು ಕರೆಯಬಹುದಾಗಿದೆ.ಜನಪದರು ನೇಯುತ್ತಿದ್ದ, ಸಿರಿಚಾಪೆಗಳು, ಬಟ್ಟೆಗಳು. ಅದರ ಮೇಲೆ ಬಿಡಿಸುವ ಪ್ರಾದೇಶಿಕ ಪ್ರಾಣಿ ಪಕ್ಷಿಗಳ ಚಿತ್ರಗಳು ಅವರ ಕಲಾವಂತಿಕೆಯ ನಿದರ್ಶನಗಳಾಗಿವೆ. ಇವು ಅವರ ಮನಸ್ಥಿತಿಯನ್ನು, ಅವರ ಸಂಸ್ಕೃತಿಯನ್ನು ಪ್ರತಿನಿಧಿಸುವ ಪ್ರಮುಖ ಸಾಧನಗಳಾಗಿವೆ.


- ಜಿ.ಶ್ರೀನಿವಾಸಯ್ಯ.