ಬುಧವಾರ, ಫೆಬ್ರವರಿ 1, 2012

ಮನೆ ಬಳಕೆ ವಸ್ತುಗಳು

   ಹಿಂದೆ ಸೋಗೆ ಅಥವಾ ಇತರೆ ಮನೆಗಳನ್ನು ಬಳಕೆಗಾಗಿ ಮೂರು ಭಾಗಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ದೇವಮೂಲೆಯ ಭಾಗದಲ್ಲಿ ಅಡಿಗೆ ಮನೆಯಿರುತ್ತದೆ. ಅಲ್ಲಿ ಅಡಿಗೆಯ ತಯಾರಿಕೆಗೆ ಬಳಸುವ ಸಾಧನಗಳು ಮತ್ತು ಅದರ ಪೂರಕ ಪರಿಕರಗಳನ್ನು ಕಾಣಬಹುದು. ನಡುಮನೆಯಲ್ಲಿ ದೇವರ ಪಟಗಳು ಮತ್ತು ಬಂಧುಗಳು ಬಂದಾಗ ಕುಳಿತೇಳಲು ಬೇಕಾದ ಸಾಧನಗಳು ಮತ್ತು ಇತರೆ ವಸ್ತುಗಳು ಅಲ್ಲಿರುತ್ತವೆ. ಮೂರನೆಯ ಭಾಗದಲ್ಲಿ ವಿಶೇಷವಾಗಿ ಬಟೆಬರೆ ಧಾನ್ಯ ಸಂಗ್ರಹ ಮತ್ತು ಕೃಷಿ ಸಂಬಂಧಿ ಉಪಕರಣಗಳಲ್ಲದೆ ಇತರೆ ಉಪಕರಣಗಳು ಇರಬಹುದು. ಕೆಲವು ಕಡೆ ಇದೇ ಗೊಡ್ಡು ಗ್ವಾದಿಗಳನ್ನು ಕಟ್ಟಿ ಹಾಕುವ ಸ್ಥಳವಾಗಿರುವುದರಿಂದ ಅಲ್ಲಿ ಅವುಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ಅದಕ್ಕೆ ಪೂರಕವಾದ ಸಾಧನಗಳು ಅಲ್ಲಿರಬಹುದು. ಆದ್ದರಿಂದ ಒಟ್ಟಾರೆ ಒಂದು ಮನೆಯಲ್ಲಿರಬಹುದಾದ ಮನೆ ಬಳಕೆ ಮತ್ತು ಅದಕ್ಕೆ ಪೂರಕವಾದ ಸಾಧನಗಳನ್ನು ಅಧ್ಯಯನದ ಅನುಕೂಲತೆಗಾಗಿ ಕೆಳಗಿನಂತೆ ವಿಂಗಡಿಸಬಹುದು.
                                                
ಕುಂಕುಮ ಭರಣಿಗಳು


ಅಡುಗೆ ಮನೆಯ ಪಾತ್ರೆ-ಪರಡಿಗಳು

    ಈ ಜನಾಂಗ ಹಿಂದೆ ಮಣ್ಣು, ತಾಮ್ರ, ಕಂಚು ಮತ್ತು ಹಿತ್ತಾಳೆಯ ಸಲಕರಣೆಗಳನ್ನು ಬಲಸುತ್ತಿದ್ದರು. ಈಗ ಅಲ್ಯಮೀನಿಯಂ, ಸ್ಟೀಲ್ ಪಾತ್ರೆಗಳನ್ನು ಮತ್ತು ಕಬ್ಬಿಣದ ಸಾಧನಗಳನ್ನು ಅಡಿಗೆ ಮನೆಯಲ್ಲಿ ಬಳಸುವುದುಂಟು. ಮಾಂಸದಡಿಗೆಯ ಪಾತ್ರೆಗಳನ್ನು ಕೆಲವು ಮನೆಗಳಲ್ಲಿ ಸಸ್ಯಾಹಾರಕ್ಕೆ ಬಳಸುವುದಿಲ್ಲ. ಅವನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಆದರೆ ಈಗಲೂ ಕೆಲವರ ಮನೆಗಳಲ್ಲಿ ಈ ವಸ್ತುಗಳು ಬಳಕೆಯಲ್ಲಿವೆ. ಆದರೆ ಸ್ಟೇಲ್ ಮತ್ತು ಅಲ್ಯೂಮೀನಿಯಂ-ಮುಂತಾದ ಆಧುನಿಕ ಲೋಹಗಳ ಬಳಕೆ ಹೆಚ್ಚಾಗುತ್ತಿದೆ.
                                             
ಬಿದಿರು ಬುಟ್ಟಿಗಳು
                                    

ಮಣ್ಣಿನ ಪಾತ್ರೆ-ಪರಡಿಗಳು

    ಹಿಂದೆ ಅಡಿಗೆಯ ಮನೆಯಲ್ಲಿ 'ಒಂಟಿಪೊಯ್ಯಿ' (ಕುಂಬಾರೊಲೆ) ಮತ್ತು ದೇಸಿಯವಾಗಿ ಸ್ವತಃ ಹುತ್ತದ ಮಣ್ಣು ಮತ್ತು ಇಟ್ಟಿಗೆಗಳನ್ನು ಬಳಸಿ ಹಾಕಿರುವ ಎರಡು ತೂತು ಒಲೆ ಇರುತ್ತಿತ್ತು. ಅಕ್ಕಿಯನ್ನಿಟ್ಟಿರುವ 'ಗುಡುವ' (ಗುಡಾಣ), 'ಬಾನೆ', ಹಿಟ್ಟು ಮಾಡಲು ಬಳಸಿವ 'ಸಂಗಟಿಸಟ್ಟಿ' (ಹಿಟ್ಟುಗೋಲು), ಅದರ ಮೇಲೆ  ಮುಚ್ಚುವ 'ಮೂಗಟಿ'(ಚಟ್ಣ), ಸಾರನ್ನು ಮಾಡಲು  ಬಳಸುವ 'ಸ್ಯಾರುಸಟ್ಟಿ', (ಸಾರು ಮಡಿಕೆ) ಅದರ ಮೇಲೆ ಮುಚ್ಚುವ 'ಮೂಗಟಿ' (ಚಟ್ಣ), ಸ್ಯಾರನ್ನು ಬಸಿಯಲು ಬಳಸುವ 'ಗಿದ್ದಿ'(ಕುಡಿಕೆ), 'ಬೊಪ್ಪುಲು'.(ಮರಗಿ) ನೀರನ್ನು ಕುಡಿಯಲು ಉಪಯೋಗಿಸುವ 'ಮುಂತುಲು' (ಕುಡಿಕೆ), ನೀರನ್ನು ತುಂಬಿಡುತ್ತಿದ್ದ 'ಗೆಡಿಗಲು', 'ಕಡವಲು'(ಕೊಡ/ಹರಿವೆ) ,ಹಾಲು ಕಡಿಯಲು ಬಳಸುತ್ತಿದ್ದ 'ಪಾಲಸಟ್ಟಿ' (ಹಾಲುಮಡಿಕೆ), ತುಪ್ಪವನ್ನು ಶೇಖರಿಸುತ್ತಿದ್ದ 'ನೆಯ್ಯಿಮುಂತಾ' (ತುಪ್ಪದ ಕುಡಿಕೆ), ಹಾಲನ್ನು ಕರೆಯಲು ಬಳಸುತ್ತಿದ್ದ 'ಪಾಲಮುಂತ' (ಹಾಲು 
ಅಳತೆ ಪರಿಕರಗಳು-ತೂಮು, ಸೇರು,ಪಡಿ.ಅರಪಡಿ,ಸೊಲಿಗೆ.ಚಟಾಕು
ಕುಡಿಕೆ),ಅಡಿಗೆಯ ಪಾತ್ರೆಯಿಂದ ತೆಗೆದ  'ಮಾಡುಗೋಕ' (ಮುಸುರೆ) ನ್ನು ಹಾಕಲು ಅಲ್ಲೇ ಇಟ್ಟು ಕೊಂಡಿರುತ್ತಿದ್ದ 'ಕುಡಿತಿಬಾನ', ಅಕ್ಕಿಕಾಳುಗಳನ್ನು ಹಾಕಿಕೊಳ್ಳುವ 'ದಂತುಲು' (ಅರಕಲ ಗಡಿಗೆಗಳು) ಮತ್ತು 'ಕುಮ್ಮರ ಗಾದುಲು' (ಕುಂಬಾರ ವಾಡೆ ಕಣಜಗಳು) ಮುಂತಾದ ಮಣ್ಣಿನ ಪಾತ್ರೆ-ಪರಡಿಗಳು ಅಲ್ಲಿರುತ್ತಿದ್ದವು.
                  
ದಾಗಿರಿ-ಬೀಸುವಕಲ್ಲು(ರಾಗಿಕಲ್ಲು)
                                
   ನಡುಮನೆಯಲ್ಲಿ ''ದೀಗೂಡಿ'ನಲ್ಲಿ 'ದೀಪಾಂತಿ'ಗಳು ಇರುತ್ತಿದ್ದವು. ಗುಡಿಸಿಲ್ಲು ಮತ್ತು ಸುಟ್ಟಿಲ್ಲುಗಳಲ್ಲಿ ಕುಂಬಾರವಾಡೆಗಳು ಅರಕಲ ಗಡಿಗೆಗಳೂ ಅಲ್ಲೆ ಜೋಡಿಸಿರುವುದುದುಂಟು.
   ಆದರೆ ಮಣ್ಣಿನ ಪಾತ್ರೆಗಳ ಬಳಕೆ ಅಪರೂವಾಗುತ್ತಿದೆ. ಶುಭಾಶುಭ ಕಾರ್ಯಕ್ರಮಗಳಲ್ಲಿ ಮತ್ತು ಮನೆಯ ಅಡಿಗೆ ತಯಾರಿಕೆಯಲ್ಲಿ ಇವುಗಳಲ್ಲಿ, ಕೆಲವು ಪಾತ್ರೆಗಳ ಉಪಯೋಗ ಹಳ್ಳಿಗಾಡಿನಲ್ಲಿ ಈ ಜನಾಂಗದಲ್ಲಿ ಚಾಲ್ತಿಯಲ್ಲಿದೆ.

ಮರದ ಸಾಮಾನುಗಳು

   ಹಾಲನ್ನು ಕಡಿಯಲು ಬಳಸುವ 'ಸಲ್ಲಗುತ್ತಿ'(ಕಡೆಗೋಲು), ಸೊಪ್ಪನ್ನು ಅರೆಯಲು ಬಳಸಿತ್ತಿದ್ದ'ಪೊಪ್ಪುಗುತ್ತಿ' (ಮಸೆಗೋಲು) ಹಿಟ್ಟನ್ನು ಕಲಕಲು ಬಳಸುವ 'ಸಂಗಟಿಗಟ್ಟಿ' (ಹಿಟ್ಟಗೋಲು), ಹಿಟ್ಟಬಾನೆಯ ಕಂಟಕ್ಕೆ ಹಾಕುತ್ತಿದ್ದ'ಮೆಟ್ಟಗಟ್ಟಿ' (ಮೆಟ್ಟುಗೋಲು), ಸಾರನ್ನು ಹಾಕಲು ಬಳಸುತ್ತಿದ್ದ'ಸಿಪ್ಪಗಟ್ಟಿ' (ಸೊಟ್ಟಗೋಲು)ಗಳು. ಉಪ್ಪು ಹಾಕಲು ಬಳಸುವ'ಎದರುಬುರ್ರ'( ಬಿದಿರು ಬುರೆಗಳು),ಮುದ್ದೆ ಮಾಡಲು ಬಳಸುವ 'ಮುದ್ದೆ ಚಟ್ನ' ಕುಟ್ಟುವ ಸಾಧನವಾದ'ರೋಕಿಲಿ' (ಒನಕೆ, ಮತ್ತು 'ಕುದುರು'(ಕುಂದಲಿಗೆ),ಬೀಸುವ ಸಾಧನವಾದ'ಸ್ಯಾಟ್ಲು' (ಮೊರಗಳು), ಹೊಡೆಯುವ ಸಾಮಾನಾದ 'ಕೊಡಿತಿ'ಗಳು, ಅಡಿಗೆ ಸಾಮಾನುಗಳಾದ 'ಸಾಸ್ತೇಲು ಕುರುಡು' (ಶಾವಿಗೆ ಕುರುಡು), ಧವಸ ಧಾನ್ಯ ಹೊರಲು ಬಳಸುವ 'ದಾಗಿರಿ' (ಹಿಟಗೆರಿಸಿ), 'ಗಂಪಾ' (ಹೆಡಿಗೆ),' ಪುಟಿಕೆ' -ಮುಂತಾದ ಸಾಮಾನುಗಳಿರುತ್ತವೆ. 
ಬಿದಿರು ಬುರುಡೆಗಳು

                                 
   ಅಡ್ಡಿಪಿಲ್ಲು ಅಲ್ಲದ ಮನೆಗಳಲ್ಲಿ ಎಲ್ಲಾ ಸಾಮಾನುಗಳೂ ಒಟ್ಟೊಟ್ಟಿಗೆ ಇರುವುದುಂಟು. ದಿಗೂಡಲ್ಲಿ ಮರದ ಕುಂಕುಮಭರಣಿ, 'ದುವ್ವಾಣಿ' (ಬಾಚಣಿಗೆ), 'ಈರಬಾಣಿ' (ಸೀರಣಿಗೆ), ಮತ್ತು ದೇವರ ಪಟಗಳನ್ನಿಡಲು ಬಳಸುವ 'ಪಟಾಲು ಚಕ್ಕ'(ದೇವರ ಪಟಗಳನ್ನಿಡುವ ಮರದ ಹಲಗೆ),'ಕಳಸದ ಪೀಠ', ಕುಳಿತುಕೊಳ್ಳಲು ಬಳಸುವ 'ಚಕ್ಕಪೀಠಲು'- ಮುಂತಾದವುಗಳು ನಡು ಮನೆಯಲ್ಲಿ ಇರುವುದುಂಟು.
   ಕತ್ತರಿಸುವ ಸಾಧನಗಳಾದ-'ಸುರಕತ್ತಿ', 'ಮಚ್ಚುಗತ್ತಿ' (ಕೊಡಲಿ), 'ಮಲಸುರಿ', 'ಕತ್ತಿಪೀಟ' ಮತ್ತು ಮಾಂಸ ಕತ್ತರಿಸುವ 'ಮರದುಂಡು'-ಮುಂತಾದ ಪರಿಕರಗಳು ಇರುತ್ತವೆ.
   ಕೃಷಿ ಸಂಬಂಧಿ ಉಪಕರಣಗಳಾದ_ ಮಕ್ಕರಿ, ಗೊಡ್ಲಿ, ದ್ವಾಕರಬಾರೆ, ಕಕ್ಕುಕೊಡಲಿ, ಗುದ್ದಲಿ, ಸಲಿಕೆ, ಪಿಕಾಸಿ, ದೋಟಿಸಿವ, ಎತ್ತುಗಳಿಗೆ ಬೀಜ(ತರಡು) ಹೊಡೆಯುವ 'ಇರ್ಕಟ್ಟಿ', ನೀರೆತ್ತವ 'ಗೂಡೆ, ಪಶುಗಳಿಗೆ ಔಷಧಿ ಹಾಕುವ 'ಗೊಟ್ಟ'ಗಳು, ಎತ್ತುಗಳನ್ನು ಹೊಡೆಯುವ 'ಸಾಟಿಕಟ್ಟಿ'  (ಚಾಟಿಗೋಲು), ಪಶುಗಳಿಗೆ ಮೂಗು ಚುಚ್ಚಲು ಬಳಸುವ 'ಮುಗಿದಾಡು ಕಡ್ಡಿ' (ಮೂಗುದಾರ ಹಾಕಲು ಚುಚ್ಚುವ ಕಡ್ಡಿ), ನೇಗಿಲು ಮತ್ತು ಬಂಡಿಗೆ ಎತ್ತುಗಳನ್ನು ಕಟ್ಟಲು ಬಳಸುವ 'ಲೋಗಾಡಿಕಡ್ಡಿ' ಮತ್ತು 'ಪಲುಪುಲು'(ಜತ್ತಿಗೆ), ಮುಗಿಜಿಂಬ್ರಾ (ಕುಕ್ಕೆ) -ಮುಂತಾದ ಪರಿಕರಗಳು ಅಲ್ಲಿರುವುದು ಕಾಣಬಹುದು.
                                      
ಲೋಹದ ಗಂಟೆಗಳು

    ಜನಜೀವನಕ್ಕೆ  ಮತ್ತು ಬೇಟೆಗೆ ಸಂಬಂಧಿಸಿದ ಪರಿಕರಗಳು-ಮೀನನ್ನು ಹಿಡಿಯಲು ಬಳಸುವ 'ಕೊಡುಮೆ', 'ಗುದ್ದಿಕಟ್ಟಿ'(ಬಾಗಿರುವ ಕಡ್ಡಿ), 'ಸೋಟಾಕಟ್ಟಿ', 'ಅನಸುಲುಕಟ್ಟಿ, 'ಬಲ್ಲೆಮು' ಕ್ಯಾಟಲುಬಿಲ್ಲು, ಒಂಟೀಲ್ಲುದೆಬ್ಬಾ, ಮರದ ಬೋನು, ಪಾದಿಗಳು,ಮಕ್ಕಳಾಡುವ ಮರದ ಬೊಂಬೆಗಳು-ಮುಂತಾದ ಬೇಟೆಯ ಮತ್ತು ಜನಜೀವನದ ಪರಿಕರಗಳು ಕೆಲವು ವೇಳೆ ಮನೆಯಲ್ಲಿರುತ್ತವೆ.

ಲೋಹ, ಕಲ್ಲು ಮತ್ತು ಇತರ ಸಾಧನಗಳು.























    ದೇವರಿಗೆ ಆರತಿಯೆತ್ತಲೂ ಅನ್ನ ಬಡಿಸಲು ಮತ್ತು ಮದುವೆಯಲ್ಲಿ ಒಸಗೆಯಿಡಲು ಬಳಸುವ ಹಿತ್ತಾಳೆಯ 'ಮಂಗಳಾರತಿ ತಟ್ಟೆ, ನಲುಗು ತಟ್ಟೆ, ಕೈಯ್ಯಿ ತಟ್ಟೆಗಳನ್ನು ಇವರಲ್ಲಿ ಕಾಣುತ್ತೇವೆ. ಊಟ ಮಾಡಲು ಬಳಸುವ ಹಿತ್ತಾಳೆ ತಟ್ಟೆಗಳು. ಕಂಚುತಟ್ಟೆಗಳು ಕಂಡುಬರುತ್ತವೆ. ನೀರನ್ನು ತುಂಬಿಸಿಡಲೂ ಮತ್ತು ತರಲು ಬಳಸುವ ಬಿಂದಿಗೆ, ಕೊಳಗ, ಅಂಡಗಳನ್ನು ಕಾಣಬಹುದು. ಅಲ್ಲದೆ ನೀರು ಕುಡಿಯಲು ಬಳಸುತ್ತಿದ್ದ ಹಿತ್ತಾಳೆ, ಕಂಚು ಮತ್ತು ಅಲವರ ಗ್ಲಾಸುಗಳು ಇಂದಿನ ತನಕ ಬಳಸುತ್ತಿದ್ದರು. ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಹಾಕಲು 'ಪಾಲಾಡಿ'(ಹಾಲಾಡಿ)ಯನ್ನು ಬಳಸುತ್ತಿದ್ದರು. ಧವಸ ಧಾನ್ಯಗಳನ್ನು ಮತ್ತು ತುಪ್ಪ ಅಳೆದು ಕೊಡಲು-ಇಬ್ಬಳಿಗೆ, ಸೇರು, ಪಡಿ, ಪಾವು ಮತ್ತು ಚಟಾಕುಗಳನ್ನು 
ಜಾಲಾರಲು ಪಿಲಂಗೋವಿ

                                  

ಉಪಯೋಗಿಸುತ್ತಿದ್ದರು. ಸಾರಾಯಿಯನ್ನು ಅಳೆದು ಕೊಡುವ ಸಲುವಾಗಿ ಲೋಹದ 'ದರಾಮು ಗ್ಲಾಸು'ಗಳು ಇವರಲ್ಲಿದ್ದವು. ಎತ್ತಿನ ಕೊರಳು ಮತ್ತು ಕೊಂಬುಗಳನ್ನು  ಅಲಂಕರಿಸುತ್ತಿದ್ದ 'ಕೊರಳುಗಂಟೆಗಳು', 'ಗಗ್ಗರ ಮತ್ತು ಕೊಂಬುಕುಪ್ಪಗಳ ಕಿಂಕಿಣಿ ನಾದ ಯಾಕೋ ಕಡಿಮೆಯಾಗುತ್ತಿದೆ. ಮನೆಯ ಗೂಟಕ್ಕೆ ನೇತಾಡುತ್ತಿದ್ದ 'ಕಹಳೆ' ತನ್ನ ಗಂಟಲ ಧ್ವನಿಯನ್ನು ಕಳೆದುಕೊಂಡಿದೆ.
                                                             
ಗುಡಾಣ

    ಆದರೆ ಇವರ ಬದುಕಿಗೆ ಎಲ್ಲರಂತೆ ಅಲ್ಯೂಮಿನೀಯಂ ಮತ್ತು ಸ್ಟೀಲ್ ಲೋಹಗಳು ಪ್ರವೇಶ ಮಾಡಿವೆ. ಆದರೂ ಬಹುತೇಕ ಜನರು ಬಳಸದಿದ್ದರೂ ಪ್ರತಿಷ್ಠೆಗಾಗಿಯಾದರೂ ಲೋಹದ ಸಾಮಾನುಗಳನ್ನು ಇಟ್ಟುಕೊಂಡಿರುವುದು ಕಾಣಬುಹುದಾಗಿದೆ.
    ಕಲ್ಲಿನ ಸಾಮಾನುಗಳಾದ ಮಸೆಗಲ್ಲು, ಗುಂಡುಕಲ್ಲು, ರುಬ್ಬುಗುಂಡು ಮತ್ತು ಬೀಸುವ ಕಲ್ಲು ಅಲ್ಲಲ್ಲಿ ಇನ್ನೂ ಬಳಕೆಯಾಗುತ್ತಿವೆ. ನವನಾಗರಿಕತೆಯ ಸಾಧನಗಳಾದ ಮಿಕ್ಸೀಯಿಂದ ಮಸೆಗಲ್ಲು, ಗುಂಡುಕಲ್ಲು ಮತ್ತು ರುಬ್ಬುವ ಕಲ್ಲುಗಳು ಮೂಲೆ ಸೇರುವಂತಾಯಿತು. ಬತ್ತ ಮತ್ತು ರಾಗಿ ಕುಟ್ಟುವ ಯಂತ್ರಗಳ ಪ್ರವೇಶದಿಂದ ದೇಸಿಯವಾದ ಇಂತಹ ಪರಿಕರಗಳು ನಡು ಮುರಿಸಿಕೊಂಡು ತೆವಳುವಂತಾಗಿದೆ.
ಹೆಡಿಗೆ(ಗಂಪ)

                                
    ಮನೆಯಲ್ಲಿ ಜನಜೀವನಕ್ಕೆ ಪೂರಕವಾಗಿರುವ ಅನೇಕ ಬಗೆಯ ಪರಿಕರಗಳನ್ನು ಕಾಣಬಹುದು. ಅನ್ನ, ತುಪ್ಪ -ಇನ್ನಿತರೆ ಪದಾರ್ಥಗಳನ್ನು ಬೆಕ್ಕು ಮತ್ತು ಮಕ್ಕಳ ಕೈಗೆ ಸಿಗದಂತಿರಲು ನಮ್ಮ ಜನರು ಹಗ್ಗದ ಹುರಿಯಿಂದ ಮಾಡಲ್ಪಟ್ಟ 'ಉಟ್ಟಿ'ಯನ್ನು ಬಳಸುತ್ತಿದ್ದರು. ನೀರನ್ನು ಹೊತೊಯ್ಯಲು'ಸೊರಬುರುಡೆ'ಗಳನ್ನು ಉಪಯೋಗಿಸುತ್ತಿದ್ದರು. ಏತದ ಬಾನೆಗಳು ನೀರಾವರಿಗೆ ಅಲ್ಲದೆ, ಹಿಂದೆ ಅನ್ನ ಸಂತರ್ಪಣೆಯಲ್ಲಿ ಅನ್ನ ಬಡಿಸುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು.
   ಜಾನಪದ ಕಲಾ ಮತ್ತು ಕುಲ ಕಸುಬಿನ ಪರಿಕರಗಳಾದ -ಉರುಮು. ಮದ್ದಿಲಿ, ರಂಡೋಲು, ಕೊಳಲು, ಇತ್ಯಾದಿಗಳ ಚರ್ಮವಾದ್ಯಗಳ ಧ್ವನಿ ತಣ್ಣಗಾಗುತ್ತಿದೆ. ಅದರ ಬದಲಿಗೆ ಅದರ ವಾರಸುದಾರರಾಗಿ ಬಂದಿರುವ 'ಪೈಬರ್ ಹಾಳೆ'ಯ ವಾದ್ಯಗಳು ರಾರಾಜಿಸುತ್ತಿವೆ. ಹೀಗೆ ದೇಸೀಯತೆಯ ಮೇಲೆ ಆಧುನಿಕತೆಯ ದಾಳಿ ತೀವ್ರತೆಯನ್ನು ಎಲ್ಲೆಡೆಯಲ್ಲೂ ಕಾಣುತ್ತಿದ್ದೇವೆ.

1 ಕಾಮೆಂಟ್‌:

  1. ಸುಂದರ ವಿವರಣೆಗಳು ಡಾ. ಶ್ರೀನಿವಾಸಯ್ಯನವರೇ, ನಿಮ್ಮ ಕೆಲವು ಚಿತ್ರಗಳನ್ನು ಮತ್ತು ಪದಗಳನ್ನು "ಪದಾರ್ಥ ಚಿಂತಾಮಣಿ" ಎಂಬ ಫೇಸ್ಬುಕ್ ಸಮೂಹದಲ್ಲಿ ಪದಪರಿಚಯಕ್ಕೆ ಬಳಸಿಕೊಂಡಿದ್ದೇನೆ...ತಮ್ಮ ಅನುಮತಿ ಪಡೆಯದೇ ತಪ್ಪಾಗಿದೆ...ದಯವಿಟ್ಟು ಕ್ಷಮಿಸಿ.

    ಪ್ರತ್ಯುತ್ತರಅಳಿಸಿ