ಪೂರ್ವದಲ್ಲಿ 'ಹೆರಿಗೆ' ಮಾಡಿಸುವ ಪದ್ಧತಿ ವಿಶಿಷ್ಟವಾಗಿತ್ತು. ಶಿಶು ಈ ವಿಶಾಲ ಬದುಕಿಗೆ ಪ್ರವೇಶ ಪಡೆಯುವುದನ್ನು ಹೆರಿಗೆ ಎನ್ನುವರು. ನಿಗದಿತ ಅವಧಿಗೆ ಪೂರ್ವದಲ್ಲೆ ಶಿಶು ಬೀಳುವ ಕ್ರಿಯೆಗೆ 'ಮೈಯ್ಯಿಳಿಯೋದು'ಎನ್ನುವರು. ಇಂತಹ ಸಮಯಗಳಲ್ಲಿ ಹೀಗಿನ ರೀತಿಯಲ್ಲಿ ಆಸ್ವತ್ರೆಯಲ್ಲಿ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನಡೆಯುತ್ತಿರಲ್ಲಿಲ್ಲ. ಆಗ ಮನೆಗಳಲ್ಲೆ ಹೆರಿಗೆಯನ್ನು ಮಾಡಿಸುತ್ತಿದ್ದರು. ಅಂತಹ ಕಾರ್ಯವನ್ನು ಒಬ್ಬ ನುರಿತ ಮುದುಕಿ ಮಾಡಿಸುತ್ತಿದ್ದಳು. ಆಕೆಯನ್ನು 'ಮಂತ್ರಸಾನಿ'(ಸೂಲಗಿತ್ತಿ) ಎಂದು ಕರೆಯುವರು. ಇವರು ಗ್ರಾಮದ ಮುದುಕಿಯರೇ ಆಗಿರುತ್ತಿದ್ದು ವಿಶೇಷ. 
ಗಭರ್ಿಣಿಗೆ ಮೊದಲು ಸೊಂಟನೋವು ಆರಂಭವಾಗಿ, ಅದು ತೀವ್ರವಾಗುತ್ತಾ ಹೋಗುತ್ತದೆ. ಹೆರಿಗೆಯ ನೋವಿನಿಂದ ಬಳಲುತ್ತಿದ್ದಾಗ ನಾಟಿವೈದ್ಯದಂತಹ ಔಷದೋಪಚಾರವನ್ನು ಮಾಡುವ ಕುಶಲತೆಯಿತ್ತು. ಎಲ್ಲಾ ರೀತಿಯ ವೈದ್ಯಗಳು ಕೆಲವು ಮುದುಕಿಯರೇ ಮಾಡುತ್ತಿದ್ದರು. ಅಲ್ಲದೆ ಅನೇಕ ಆಚಾರಗಳು ನಂಬಿಕೆಗಳನ್ನು ನಂಬತ್ತಿದ್ದರು. ತುಂಬಾ ನೋವಾಗುತ್ತಿರುವಾಗ ಬೇಯಿಸಿದ ನುಗ್ಗೆ ಸೊಪ್ಪಿನ ರಸವನ್ನು ಕುಡಿಸುತ್ತಿದ್ದರು. ಮಂತ್ರಿಸಿ ಅರಳೆಣ್ಣೆಯನ್ನು ಹೊಟ್ಟಗೆ ಹಚ್ಚಿ ಮೃದುವಾಗಿ ತೀಡುತ್ತಿದ್ದರು. ಎದೆಯ ಮೇಲ್ಬಾಗದಲ್ಲಿ ಅರಳೆಣ್ಣೆಯನ್ನು ಬಿಡುತ್ತಿದ್ದರು ಅದು ನೇರವಾಗಿ ಹೊಟ್ಟೆಯ ಗುಂಟಾ ಸಾಗಿದರೇ ಸುಖ ಪ್ರಸವವಾಗುತ್ತದೆ. ಅದು ವಕ್ರವಾಗಿ ಜಾರಿದರೆ ಹೆರಿಗೆ ಕಷ್ಟವೆಂದು ಹೇಳುತ್ತಿದ್ದರು. ಕೆಲವು ವೇಳೆ ಸುಖ ಪ್ರಸವಕ್ಕಾಗಿ ಉಯ್ಯಾಲೆ ಕಟ್ಟಿ ತೂಗುತ್ತಿದ್ದರು. ತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿಸುತ್ತಿದ್ದರು. ಬಿಸಿ ನೀರನ್ನು ಸೊಂಟದ ಕೆಳಗಡೆಗೆ ಹೊಯ್ದರೆ ಸುಲಭವಾಗಿ ಪ್ರಸವವಾಗುವುದೆಂದು ನಂಬಿದ್ದರು. ತಮ್ಮ ಮನೆದೇವರಿಗೆ ಮುಡುಪು ಕಟ್ಟಿ ಪ್ರಾಥರ್ಿಸುವ ಪದ್ಧತಿಯೂ ಇತ್ತು. ಇಲ್ಲಿ ವಿಶೇಷವಾಗಿ ಕೂರಸಿ ಹೆರಿಗೆ ಮಾಡಿಸುವ ಸಂಪ್ರದಾಯ ರೂಢಿಯಲ್ಲಿತ್ತು.
ಹೆರಿಗೆಯನ್ನು ಸೂಲಗಿತ್ತಿ ಮಾಡಿಸುತ್ತಿದ್ದಳು. ಹೊಕ್ಕುಲ ಬಳ್ಳಿಯನ್ನು ಕತ್ತರಿಸುತ್ತಿದ್ದಳು. ಇದು ತಾಯಿ ಮತ್ತು ಮಗುವಿನ ಶಾರೀರಿಕ ಸಂಬಂಧವನ್ನು ಕಡೆಯುವುದಾಗಿರುತ್ತದೆ. ಕೈಯಿಂದ ಮೂರು ಅಂಗುಲದ ಅಳತೆ ಮಾಡಿ ಹೊಕ್ಕುಳ ಬಳ್ಳಿಯನ್ನು ದಾರದಿಂದ ಕಟ್ಟಿ ಕತ್ತರಿಸಿ,ಅದನ್ನು ದೀಪದ ಬೆಂಕಿಗೆ ತಾಕಿಸಿ ಬಿಟ್ಟುಬಿಡುತ್ತಿದ್ದರು. ಆಗ ಮಗು ಅಳಬೇಕೆಂದು ಹೇಳುತ್ತಾರೆ. ಹಳೆಯ ಬಟ್ಟೆಗಳಿಂದ ಮೈಯ ಕೊಳೆಯನ್ನು ಶುದ್ಧಿ ಮಾಡಲಾಗುತ್ತದೆ (ಬಿಸಿ ನೀರಿನಿಂದ ಮಗುವನ್ನು ತೊಳೆಯುತ್ತಾರೆ) ಮಗುವಿನ ಸುತ್ತಲೂ ಇರುವ ಕವಚವನ್ನು 'ಮಾಸು'(ಸತ್ತೆ) ಎನ್ನುವರು. ಇದು ಗರ್ಭದಿಂದ ಬಿದ್ದನಂತರವೇ ಮುಂದಿನ ಕಾರ್ಯಗಳನ್ನು ಸೂಲಗಿತ್ತಿ ಮಾಡುತ್ತಿದ್ದದ್ದು. ನಂತರ ಅದನ್ನು ರಕ್ತಮಯವಾದ ಬಟ್ಟೆಗಳನ್ನು ಗುಟ್ಟಾಗಿ( ಗಂಡಸರಿಗೆ ಕಾಣದಂತೆ) ತೆಗೆದುಕೊಂಡು ಹೋಗಿ ಹಾಳು ಬಾವಿಗೋ, ಪಾತ್ರೆ( ಧಾನ್ಯ ಸಂಗ್ರಹಿಸುತ್ತಿದ್ದ ಈಗ ಬಳಕೆಯಲ್ಲಿದ ಹಾಳುಬಿದ್ದ ಕಣಜಗಳು) ಹಾಕಿ ಬರುತ್ತಾರೆ. ಅಥವಾ ಆಳವಾಗಿ ಗುಣಿತೆಗೆದು ಹೂತು ಬರುವರು. ಆದರೆ ಕೊಳ್ಳುದ್ಯಾವರು(ಗುಣಿಶಾಸ್ತ್ರ) ಇರುವವರು ಈ ಮಾಸನ್ನು ಒಂದು ಮಡಿಕೆಯಲ್ಲಿ ಹಾಕಿಟ್ಟು ಅದನ್ನು ಬಚ್ಚಲಿನ ಹತ್ತಿರ ಗುಣಿ ತೋಡಿ ಹೂಳುವರು. ನಂತರ ಹನ್ನರಡನೇ ದಿನವೂ ಅಲ್ಲಿ ಕೋಳಿ ಕೊಯ್ಯದು 'ಕೊಳ್ಳುದ್ಯಾವರೂ' ಮಾಡುತ್ತಾರೆ. ಒಟ್ಟಾರೆಯಾಗಿ ನಾಯಿ ನರಿಗಳು ಅದನ್ನು ತಿನ್ನಬಾರದೆಂಬುದು ಅವರ ಉದ್ದೇಶವಾಗಿತ್ತೆಂದು ಕಾಣುತ್ತದೆ.
ಸೂಲಗಿತ್ತಿ ಮಗುವಿನ ಮೈಗೆಲ್ಲ ಅರಳೆಣ್ಣೆ ತಿಕ್ಕುವಳು. ಜನಿಸಿದ ಮಗು ಗಂಡು ಮಗುವಾದರೆ ಗಂಡಸರು ಅಥವಾ ಗಂಡು ಹುಡುಗರಿಂದ 'ಚವನೂನಿ'(ಚವೆಣ್ಣೆ) ಹುಡುಗಿಯಾದರೆ ಹುಡುಗಿಯರಿಂದ ಎಣ್ಣೆಯನ್ನು ಹಾಕಿಸಲಾಗುತ್ತದೆ(ಆದರೆ ಈಗ ಸಕ್ಕರೆ ನೀರನ್ನು ಅಥವಾ ಹಾಲನ್ನು ಹಾಕಿಸಲಾಗುತ್ತದೆ.) ಆದರೆ ಆ ಎಣ್ಣೆ ಹಾಕಿದವರ ಗುಣ ಸ್ವಭಾವಗಳು ಆ ಮಕ್ಕಳಿಗೂ ಬರುತ್ತವೆಂದು ನಂಬಲಾಗುತ್ತದೆ. ಆದ್ದರಿಂದ ಒಳ್ಳೆಯ ಗುಣ ಸ್ವಬಾವದವರಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದರು. ಒಂದು ಮಕ್ಕಳು ಕೆಟ್ಟ ಬುದ್ಧಿಗಳನ್ನು ರೂಢಿಸಿಕೊಂಡಾಗ ಚೆವೆ ಹಾಕಿದವರನ್ನು ಬೈಯುವ ಸಂಪ್ರದಾಯ ಇಂದಿಗೂ ಉಳಿದುಕೊಂಡಿದೆ. ಹಿಂದೆ ಬಾಣಂತಿ ಕಾರ್ಯಕ್ಕಾಗಿಯೇ ಅರಳೆಣ್ಣೆಯನ್ನು ತಯಾರು ಮಾಡುತ್ತಿದ್ದರು. ಇದನ್ನೂ ಸಹ ನುರಿತ ಮುದುಕಿಯರು ತಯಾರಿಸುತ್ತಿದ್ದರು. ಅರಳೆಣ್ಣೆ, ಬೆಳ್ಳುಳ್ಳಿ ಮತ್ತು ಹೊಕ್ಕುಲಬಳ್ಳಿಯ ಒಂದು ಚೂರು ಹಾಕಿ ಅದನ್ನು ಚನ್ನಾಗಿ ಕುದಿಸಲಾಗುತ್ತಿತ್ತು. ಆ ಎಣ್ಣೆಯನ್ನು ಚೆವೆಯಾಗಿ ಹಾಕಲಾಗುತ್ತಿತ್ತು. ಆದರೆ ಹಾಕುವ ಸಂದರ್ಭದಲ್ಲಿ ದೇವರ ಗುಣ ಕೊಂಚ ,ನನ್ನ ಬುದ್ಧಿಯನ್ನು ಸ್ವಲ್ಪ, ನಿನ್ನ ತಂದೆ-ತಾಯಂದಿರ ಗುಣ ಸ್ವಲ್ಪ ಎಂದು ಒಬ್ಬರ ಹೆಸರನ್ನು ಹೇಳುತ್ತಾ ಒಂದೊಂದು ಹನಿಯನ್ನು ಹಾಕುತ್ತಿದ್ದರು. ಆರಿದ ನಂತರ ಅದನ್ನು ಮಗುವಿನ ಮೈಗೆ ಮೃದುವಾಗಿ ತಿಕ್ಕಿತೀಡಲಾಗುತ್ತದೆ.(ಇತ್ತೀಚೆಗೆ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತಿದೆ.) ಮೈಗೆ ಸ್ನಾನ ಮಾಡಿಸುವ ಸಮಯದಲ್ಲಿ ಮಗುವಿನ ಕೈಕಾಲುಗಳು ಮುಖ ಮೂತಿಗಳು ,ಕಣ್ಣು ಉಬ್ಬುಗಳು ಮೂಗು ಸರಿಯಾದ ಆಕೃತಿಗೆ ತರುವುದು ಅದರ ಹಿಂದಿನ ಉದ್ದೇಶವೆಂದು ಹಿರಿಯರು ತಿಳಿಸುವರು.
ಮಗುವನ್ನು ಮೊರದಲ್ಲಿ ಬಟ್ಟೆಗಳನ್ನು ಹಾಕಿ ಮಲಗಿಸಲಾಗುತ್ತದೆ. ಹೀಗೆ ಮಗು ಸೂತಕದ ದಿನಗಳು(ಬಾನಂತಿ ನೀರು)ಮುಗಿಯುವ ತನಕ ಮೊರದಲ್ಲೆ ಇರುತ್ತದೆ. ಆ ಮೊರದಲ್ಲಿ ಒಂದು ಕಬ್ಬಿಣದ ಚೂರು. ಚಪ್ಪಲಿಯ ಒಂದುಚೂರು ಮತ್ತು ಪೊರಕೆ ಕಡ್ಡಿಯನ್ನು ಹಾಕಲಾಗುತ್ತದೆ. ಆ ಎಣ್ಣೆಯನ್ನು ಬೇರೆ ಮಕ್ಕಳಿಗೂ ಇಡುವರು. ಗಭರ್ಿಣಿಯಾಗಿರುವ ಹೆಂಗಸರು ತಾವೂ ತಲೆಗೆ ಸ್ವಲ್ಪ ಹಚ್ಚಿಕೊಳ್ಳುವರು. ಏಕೆಂದರೆ ತಮಗೂ ಸುಖ ಪ್ರಸವವಾಗಲಿ ಎಂಬ ಉದ್ದೇಶದಿಂದ ಹಾಗೆ ಮಾಡುವರು. ಬಾಣಂತಿಗೆ ಶುದ್ಧವಾದ ಜಾಗದಲ್ಲಿ ನೆಲ್ಲುಲ್ಲ ಹಾಸಿ, ಸೊಂಟಕ್ಕೆ ಮತ್ತು ಕಿವಿಗಳಿಗೆ ಗಟ್ಟಿಯಾಗಿ ಬಟ್ಟೆಯನ್ನು ಕಟ್ಟಿ ಅಂಗಾತವಾಗಿ ಮಲಗಿಸುವರು. ಕಿವಿಯಲ್ಲಿ ಬೆಳ್ಳುಳ್ಳಿ ಇಚುಕಿರುವ ಹತ್ತಿಯನ್ನಿಡುವರು. ಆ ಮನೆಯೊಳಗೆ ಯಾರು ಪ್ರವೇಶಿಸುವಂತಿಲ್ಲ. ಏಕೆಂದರೆ ಐದು ಅಥವಾ ಹನ್ನೊಂದು ದಿವಸದ ತನಕ ಅದು ಪ್ರವೇಶ ನಿಷಿದ್ಧ ಪ್ರದೇಶವಾಗಿರುತ್ತದೆ. ಇದನ್ನೇ 'ಪುರುಡು', ಸೂತಕವೆಂದು ಕರೆಯುವರು. ಅಲ್ಲದೆ ಬಾಣಂತಿ ಎಲ್ಲೂ ಓಡಾಡಬಾರದು. ಒಂದು ವೇಳೆ ಓಡಾಡಬೇಕಾದ ಅನಿವಾರ್ಯಾವಾದಾಗ, ಜೊತೆಗೆ ಒಬ್ಬರನ್ನು ಕರೆದುಕೊಂಡು ಹೋಗಬೇಕು.ಅಲ್ಲದೆ ಜೊತೆಗೆ ಪೊರಕೆ ಮತ್ತು ಚಾಕುವನ್ನು ತೆಗೆದುಕೊಂಡು ಹೋಗಬೇಕು. ಏಕೆಂದರೆ ಹಸಿಮೈಯಲ್ಲಿ ಭೂತ ಪಿಶಾಚಿಗಳು ಆವರಿಸಿಕೊಳ್ಳುವುದೆಂದು ಅವರ ನಂಬಿಕೆ. ಬಾಣಂತಿ ಮನೆಗೆ ಬೇವು ಮತ್ತು ಊಡುಗದ ಸೊಪ್ಪನ್ನು ನೆಟ್ಟಿರುವುದನ್ನು ಕಾಣಬಹುದು ಅಲ್ಲದೆ ಬೇವು ಮತ್ತು ಅರಳೆಣ್ಣೆಯ ದೀಪಗಳನ್ನು ಹಚ್ಚಿಡುವ ಸಂಪ್ರದಾಯ ಹಿಂದೆಯಿತ್ತು. ರೋಗನಿರೋಧಕ ಆಹಾರ ಪದಾರ್ಥವನ್ನೇ ನೀಡಲಾಗುತ್ತಿತ್ತು. ಮತ್ತು ಬಳಸುವ ಪ್ರತಿ ವಸ್ತುವೂ ಏಕೆಂದರೆ ಇವು ರೋಗನಿರೋಧಕ ಶಕ್ತಿಯನ್ನು ಪಡೆದಿದ್ದವು. ಹಾಗೆಯೇ ಸೂತಕದ ನೆಪದಲ್ಲಿ ಬಾಣಂತಿ ಕೋಣೆಗೆ ನಿಷೇಧವೇರುವುದರ ಹಿಂದಿನ ಉದ್ದೇಶವೂ ಬಹಳ ಮುಖ್ಯವಾದುದಾಗಿ ಕಾಣುತ್ತದೆ. ಅದರ ಹಿಂದೆಯೂ ಶುಚಿತ್ವ ಮತ್ತು ರೋಗಗಳನ್ನು ಬರದಂತೆ ಮುನ್ನೆಚ್ಚರಿಕೆ ವಹಿಸುವಂತಹ ಉದ್ದೇಶವಿದೆ. ಬಾಣಂತನದ ಸಮಯದಲ್ಲಿ ಊಟೋಪಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸುತ್ತಿದ್ದರು. ಹೆರಿಗೆಯಾಗ ಮರುದಿವಸ ಬೆಳಗ್ಗೆ, ಬಾಣಂತಿಗೆ 'ಕಾಕರಾಕು' (ಹಾಗಕಕಾಯಿ ಸೊಪ್ಪು) ವನ್ನು ಚನ್ನಾಗಿ ಅರಿದು, ಮೂರು ಚಿಕ್ಕಚಿಕ್ಕ ಉಂಟೆಗಳು ಮಾಡುತ್ತಿದ್ದರು. ಅದನ್ನು ಬರಿ ಹೊಟ್ಟೆಗೆ ಕೊಡುತ್ತಿದ್ದರು. ನಂತರ ಬಿಸಿ ನೀರು ನೀಡುತ್ತಿದ್ದರು. ಹೀಗೆ ಸೊಪ್ಪಿನ ಮದ್ದುಗಳನ್ನು ನೀಡುವುದರ ಜೊತೆಗೆ ಮೂರು ದಿವಸ ಅವಳಿಗೆ 'ಸಪ್ಪೆಅನ್ನ'ವನ್ನಿಡುತ್ತಿದ್ದರು.ಅಲ್ಲದೆ ವಾಯು ಮಾತ್ರೆಗಳು, ಪಿಪ್ಪೀಳ್ಳು(ಕರಿಮೆಣಸು) ವಾಮು, ಕಸ್ತೂರಿ ಮಾತ್ರೆಗಳು. ಬಜಾ, ನಾಮಕೊಡಿ, ಕರ್ಕಕಾಯಿ( ಅಳಲೆಕಾಯಿ), ಪರಂಗಿಚೆಕ್ಕೆ , ಮಾಚ್ಚಿಕ್ಕಾಯಿ, ನುಳಿಕಾಯಿ, ಮುಂತಾದವುಗಳನ್ನು ಮಗುವಿನ ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಮದ್ದುಗಳಾಗಿ ಬಳಸಿತ್ತಿದ್ದರು. ಮಗುವಿಗೆ ಉಷ್ಣವಾದ ಬಜೆಯನ್ನು ಅರಿದು ನೆಕ್ಕಿಸುವುದು, ಹೊಟ್ಟೆ ಉಬ್ಬರಿಸಿದ ಸಮಯದಲ್ಲಿ ನಾಮಕೊಡಿಯನ್ನು ನೆಕ್ಕಿಸುವುದು, ಕೆಮ್ಮು ವಾಸಿಗಾಗಿ ಕರ್ಕಕಾಯಿ ಯನ್ನು ಅರೆದು ಗಂಧವನ್ನು ಮಗುವಿಗೆ ನೀಡುವ ಕೆಲಸ ಮಾಡುತ್ತಿದ್ದರು. ಹಾಗೆಯೇ ಮಗುವಿಗೆ ಉಷ್ಣವಾದಾಗ ಪರಂಗಿಚೆಕ್ಕೆಯನ್ನು ಬಂಡೆಯ ಮೇಲೆ ಅರಿದು ಅದರ ಗಂಧವನ್ನು ಅಂಗೈ ಮತ್ತು ಪಾದಗಳಿಗೆ ಲೇಪಸುವ ಮನೆಮದ್ದುಗಳಾಗಿ ಬಳಸುತ್ತಿದ್ದರು.
ಮೂರು ದಿನದ ನಂತರ ಬಾಣಂತಿಗೆ ಕರಿಬೇವಿನ ಪುಡಿ ಮತ್ತು ಅನ್ನವನ್ನಿಡುತ್ತಿದ್ದರು. ಆ ಪುಡಿಯನ್ನು ತಯಾರು ಮಾಡುವುದು ತುಂಬಾ ವಿಶೇಷವಾಗಿದೆ. ಕರಬೇವು, ಬೆಳ್ಳುಳ್ಳಿ, ಸಾಸುವೆ, ಹುಣಿಸೆಹಣ್ಣು, ಮೆಣಸು, ಮತ್ತು ಜೀರಿಗೆಯನ್ನು ಚನ್ನಾಗಿ ತುಪ್ಪದಲ್ಲಿ ಉರಿದು ಹೊರಳಿಗೆ ಹಾಕಿ ಪುಡಿ ಮಾಡುವರು. ಆ ಪುಡಿಯನ್ನು ಅನ್ನದ ಜೊತೆಗೆ ಕೊಡುವರು. ಊಟ ಮಾಡುವ ಸಂದರ್ಭದಲ್ಲಿ ಬೆಳ್ಳಿಳ್ಳಿಯನ್ನು ನಂಚಿಕೊಳ್ಳುತ್ತಿದ್ದರು. ಬಾಣಂತಿಗೆ ಹೊತ್ತಿಗೆ ಎರಡು ಸಾರಿ ಊಟವನ್ನು ಕೊಡುತ್ತಿದ್ದರು. ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಊಟ ಕೊಟ್ಟರೆ ಮತ್ತೆ ರಾತ್ರಿ ಹನ್ನೆರಡಕ್ಕೆ ಊಟ ಕೊಡುವ ಪದ್ಧತಿಯಿತ್ತು. ಹೀಗೆ ಒಂಭತ್ತು ದಿನಗಳು ಕೊಡುತ್ತಿದ್ದರು. ಹನ್ನೆಡನೆಯ ದಿವಸದ ನಂತರ ಅಂದರೆ 'ನೀರಾಕಿದ' ನಂತರ ತೊಗರೆ ಬೇಳೆಯ ಸಾರು ಮತ್ತು ಅನ್ನವನ್ನು ನೀಡುವರು.
ಮಗುವಿಗೆ 'ನೀಲೇರು'ಎಂಬ ವನಸ್ಪತಿಯನ್ನು ತಂದು, ಬೆಳ್ಳುಳ್ಳಿ ಮತ್ತು ಹೊಕ್ಕುಳ ಬಳ್ಳಿಯ ಒಂದು ಚೂರು ಹಾಕಿ ಚನ್ನಾಗಿ ಕುದಿಸುತ್ತಿದ್ದರು. ಅದನ್ನು ಮಗುವಿಗೆ ಕುಡಿಸುತ್ತಿದ್ದರು. ಹೊಟ್ಟೆಗೆ ಬಾಳೆಲೆಯನ್ನು ಹಾಕುತ್ತಿದ್ದರು. ಏಕೆಂದರೆ ಬಾಳೆಲೆಯ ಹಾಗೆ ಹೊಟ್ಟೆ ಬರಲಿ ಎಂಬ ಉದ್ದೇಶವಿರಬಹುದು. ಅಲ್ಲದೆ 'ಸನಬಾಲು'(ತಾಯಿಯ ಹಾಲು)ನ್ನು ಹಿಂಡಿ, ಅದರಲ್ಲಿ ಅರಳೆಣ್ಣೆ ಹಾಕಿ ಮಿಶ್ರಣ ಮಾಡುತ್ತಿದ್ದರು. ಇದನ್ನು 'ಉಗ್ಗಾಮಿದಿಮು' ಎನ್ನುವರು. ಹತ್ತಿಯಲ್ಲಿ ಬತ್ತಿಗಳನ್ನು ಮಾಡಿ ಆ ಹಾಲಿನ ಮಿಶ್ರಣದಲ್ಲಿ ನೆನಸಿ ಹಾಕುತ್ತಿದ್ದರು. ಅವನ್ನು ಮಗುವಿನ ಕಣ್ಣುಗಳಿಗೆ ಹಾಕುತ್ತಿದ್ದರು. ಇವನ್ನು 'ಪಾಲೊತ್ತುಲು'ಎಂದು ಕರೆಯುವರು. ಕೆಲವು ಸಂದರ್ಭಗಳಲ್ಲಿ ಮಸಿ ಮಿಶ್ರಣದ ಬತ್ತಿಗಳನ್ನು ಹಾಕುತ್ತಿದರಂತೆ. ಇವನ್ನು'ಮಸೊತ್ತುಲು' ಎನ್ನುತಿದ್ದರು. ಅವರ ಕಣ್ಣುಗಳು ತಂಬಾ 'ದೃಷ್ಟಿಯ ಕಣ್ಣು'ಗಳೆಂದು ಹೇಳುವರು.
ನವ ನಾಗರಿಕತೆ ಬೆಳೆದಂತೆಲ್ಲ ಅನೇಕ ಆಚರಣೆಗಳು ತಮ್ಮ ಸಾಚಾತನವನ್ನುಕಳೆದುಕೊಳುತ್ತಿವೆ. ಕೆಲವು ಸಂಸ್ಕೃತಿಗಳು ಕೆಲವನ್ನು ಉಳಿಸಿಕೊಂಡಿದ್ದರೂ ಮೂಲ ಸೊಬಗು ಕಾಣದಾಗಿದೆ. ಅದರೂ ಪೂರ್ವ ಆಚಾರ ವಿಚಾರಗಳು ಇಂದಿಗೂ ಆಚರಣೆಯಲ್ಲಿರುವುದು ಕಾಣಬಹುದು.
-ಜಿ.ಶ್ರೀನಿವಾಸಯ್ಯ
-ಜಿ.ಶ್ರೀನಿವಾಸಯ್ಯ