ಮಂಗಳವಾರ, ಡಿಸೆಂಬರ್ 20, 2011

ಶತಾಯುಷಿ ಜನಪದ ಗಾಯಕಿ ದೊಡ್ಡಹಳ್ಳಿ ಅಕ್ಕಾಯಮ್ಮ


                                             

            ಹಿಂದಿನ ತಲೆಮಾರುಗಳಲ್ಲಿ ಗ್ರಾಮೀಣ ಬದುಕಿಗೆ ನವಚೇತನವನ್ನು ತಂದು ಜೀವನವನ್ನು ಹದನುಗೊಳಿಸುತ್ತಿದ್ದ ಜಾನಪದ ಸಾಹಿತ್ಯ ಸೊಗಡು ಇಂದು ಜನಮಾನಸದಿಂದ ದೂರವಾಗುತ್ತಿದೆ. ಒಸಗೆಪದ, ಸೋಬಾನೆಪದ,ದ್ಯಾವರುಪದ, ಕೋಲಾಟದಂತಹ ಅನೇಕ ಜನಮನರಂಜನೆಯ ಪದಗಳನ್ನು ಹಾಡಿ ಮನತಣಿಸಿಕೊಳ್ಳುತ್ತಿದ್ದ ಬಾಯಿಗಳು ಇಂದು ಧ್ವನಿ ಕಳೆದುಕೊಂಡು ಮೂಕವಾಗುತ್ತಿವೆ. ಹಾಡುವ ಧ್ವನಿಗಳನ್ನು ಮಾಧ್ಯಮದ ಮಾನದಂಡಗಳು ಮರೆಯಾಗಿಸುತ್ತಿವೆ. ಆದರೆ ಎಲೆಮರೆಯ ಕೋಗಿಲೆಗಳಂತೆ ಹಾಡನ್ನು ಅನಿವಾರ್ಯವಾಗಿಸಿಕೊಂಡು ತಮ್ಮ ಆತ್ಮತೃಪ್ತಿಗಾಗಿ ಹಾಡುತ್ತಾ ಸಹೃಯರಲ್ಲೂ ಮರೆತ ಹಾಡಿನ ಪ್ರೀತಿಯ ಭಾವವನ್ನು ಉಕ್ಕಿಸಿದ ಕಲಾ ರಸಿಕರು ಇಲ್ಲವೆನ್ನಲು ಸಾಧ್ಯವೇ? ಸುಮಾರು ನೂರ ಹತ್ತು ವಸಂತಗಳನ್ನು ಹಾಡಿಗೆ ಅಪರ್ಿಸಿದ ಅಜ್ಜಿ, ಮೊಸರು ಮಜ್ಜಿಗೆ ಮಾರಲು ,ಮಕ್ಕರಿಯನ್ನು ತಲೆಗೇರಿಸಿಕೊಂಡು ಊರೂರು ಸುತ್ತಿ, ಮನೆಮನೆಗೆ ಹೆಜ್ಜೆ ಹಾಕಿ, ಸಹೃದಯ ತಾಯಂದಿರ ತಲೆಗೊಂದು ಪದ ಕಲಿತು ,ದಾರಿ ಮಧ್ಯೆ ಗಿಡಗಂಟೆ ಮರಕ್ಕೊಂದು ಹಾಡಿಗಟ್ಟಿ ಕಲಾ ಸಹೃದಯರ ಮನಗೆದ್ದ ಕಂದೆಲುಗು ಸೀಮೆಯ ಅಕ್ಕಂದಿರ ಅಕ್ಕಮ್ಮ-ದೊಡ್ಡಕೊಂಡ್ರಹಳ್ಳಿಯ ಅಕ್ಕಾಯಮ್ಮ.
                                           
          ಗಟ್ಟಂಚಿನ ಚೌಕಳಿ ಗುಂತಕಲ್ಲು ಸೀರೆ, ಸಾದಾ ಜಾಕೀಟು ,ಕೆನ್ನೆ ತುಂಬಾ ಅರಿಶಿನ, ಹಣೆಯಲ್ಲಿ ಅಗಲ ಕುಂಕುಮ, ಗಾಜಿನ ಕರಿ ಬಳೆಗಳು, ಕಿವಿಯಲ್ಲಿ ಎಣ್ಣೆ ಇಳಿದರೂ ಹೊಳೆಯುವ ಕೆಂಪು ಹರಳಿನ ಓಲೆ, ಕತ್ತಿನಲ್ಲಿ ದಪ್ಪನೆಯ ಕರಿಮಣಿಸರ, ಕಿವಿ ತುಂಬಾ ಬುಗುಡಿ ಬಾವುರಿಗಳು, ಮೂಗಿನಲ್ಲಿ ದಪ್ಪನಾದ ಒಂಟಿಕಲ್ಲು ಮೂಗುತಿಗಳಾವುವು ಇರಲ್ಲಿಲ್ಲ. ಒಂದು ಕಾಲದಲ್ಲಿ ಅಕ್ಕಾಯಮ್ಮನು ಇಲ್ಲದೆ ಮದುವೆಗೆ ಕಳೆಯಿಲ್ಲ,ಶುಭ ಕಾರ್ಯಗಳಿಗೆ ಶೋಭೆಯಿಲ್ಲ ಎಂದು ಭಾವಿಸಿ, ಹಳ್ಳಿಯ ಎಲ್ಲಾ ಶುಭ ಕಾರ್ಯಗಳಿಗೆ ಈ ಸುಮಂಗಲೆಯನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗುತ್ತಿದ್ದ ಜತೆಗಾತಿಯರು ಇಲ್ಲ. ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ಎಂಬಂತೆ ಅವೆಲ್ಲಾ ಒಂದು ಕಾಲದಲ್ಲಿ ತೊಟ್ಟು ಮರೆದು, ಹಾಡಿನ ರುಚಿಯನ್ನು ತೋರಿಸಿದ ಅಜ್ಜಿಯ ಬೆಡಗು-ಬಿನ್ನಾಣಗಳು, ಅಜ್ಜನ ಜೊತೆಗೆ ಹೊರಟವೇನೋ ಎನ್ನವಂತೆ ಈಗ ಒಬ್ಬಂಟಿಯಾಗಿ ಮಾಘಮಾಸದ ಕೋಗಿಲೆಯಂತೆ ಮೌನವಾಗಿ ಮನೆಮುಂದೆ ಕುಳಿತ್ತಿದ್ದಳು.

                  ಏನಮ್ಮ ಸಂದಾಕಿದ್ದೀಯ, ನಾನು ಬಂದೀನಿ. ನಿಮ್ಮನ್ನ ನೋಡಾಕ ಮೇಸ್ಟ್ರು ಬಂದವರೇ ಎಂಬ ಮಾತನ್ನು ಅಸ್ವಷ್ಟವಾಗಿ ಕೇಳಿಸಿಕೊಂಡು ಯಾರು ಮಗ್ಳೆ ನೀವು ಎಂದು ತಡಬಡಾಯಿಸಿ ಕೇಳಿದಳು. ನಾನು ಉತ್ತನೂರು ರಾಜಮ್ಮಎಂದು ಅಜ್ಜಿಯ ಕೈಯನ್ನು ಹಿಡಿದು ಹೇಳಿದಳು. ಅಜ್ಜಿಗೆ ನಿಧಿ ಸಿಕ್ಕಷ್ಟು ಸಂತಸವಾಯಿತು. ಇಬ್ಬರ ಕಣ್ಣುಗಳಲ್ಲೂ ನೀರಾಡಿತು. ಬಹುಶಃ ಇಬ್ಬರ ತಾಯಂದಿರದು ಹೆತ್ತಕರಳಿನ ಕರುಣ ಭಾವವೇ ಇದು ! ಎಂದನ್ನಿಸಿತು. ರಾಜಮ್ಮ ಮತ್ತು ಅಕ್ಕಾಯಮ್ಮನದು ಸುಮಾರು ನಲವತ್ತು ವರ್ಷಗಳ ತಾಯಿ-ಮಗಳ ಸಂಬಂಧವೋ, ಪ್ರೀತಿ ವಿಶ್ವಾಸ ಅಥವ ಸಹೃದಯತೆಯ ಸಂಬಂಧವೋ ಸ್ಪಷ್ಟವಾಗಿ ಹೇಳಲಾಗದು. ನನ್ನನ್ನು ಅಜ್ಜಿಗೆ ಪರಿಚಯಿಸಿದಾಗ, ನನ್ನ ಅಜ್ಜಿಯೊಂದಿಗಿನ ಮೊಮ್ಮೊಗನ ಸಲಿಗೆಯ ಭಾವದಲ್ಲೇ ಮುಕ್ತವಾಗಿ ಆ ದಿನದ ಎರಡು ಗಂಟೆಗಳನ್ನು ಅಕ್ಕಾಯಮ್ಮ ಜೆತೆಗೆ ಕಳೆದೆ.

          ಪರಕೀಯರ ಆಳ್ವಿಕೆಯ ಅವಧಿಯಲ್ಲಿ ಪರತಂತ್ರದ ಬದುಕಾದರೂ ಜನರಿಗೆ ಜಾನಪದ ಕಲಾಸಕ್ತಿ ಕಡಿಮೆಯಾಗಿರಲ್ಲಿಲ್ಲ.ಆದರಾಭಿಮಾನಗಳು ಕುಂದಿರಲಿಲ್ಲ. ದಿನನಿತ್ಯದ ನೋವು ನಲಿವುಗಳನ್ನು ರಾತ್ರಿಯ ಆಟಪಾಟಗಳಲ್ಲಿ ಮರೆಯುತ್ತಿದ್ದರು. ಅಕ್ಷರಜ್ಞಾನ ಅಭಾವದ ಕಾಲದಲ್ಲೂ ದೇಸಿಕೃಷಿ ಮತ್ತು ಕಲೆಗಳು ಸಿರಿವಂತವಾಗಿದ್ದವು. ಬೆಂಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಆಸುಪಾಸಿನ ಮಾರಸಂದ್ರಹಳ್ಳಿಯ ಕುರುಬರ ತಿರುಪಿಳ್ಳಪ್ಪನೆಂದರೆ ದೇಸೀ ಕೃಷಿಗೆ ಒಂದು ಹೆಸರು: ಮಡದಿ ಮುನಿಯಮ್ಮನೂ ಸಹಾ. ಸುತ್ತಮುತ್ತಲ ಗ್ರಾಮಗಳಲ್ಲಿ ಹೋರಿಗಳನ್ನು ಸಾಕುವುದರಲ್ಲಿ ಇವರು ಎತ್ತಿದ ಕೈಯಾಗಿತ್ತು. ಮನೆಗೆ ಬರುವ ಅತಿಥಿಗಳಿಗೆ ಆಧರಾಭಿಮಾನದಿಂದ ಸತ್ಕಾರ ನೀಡುವದರಲ್ಲಿ ಮುನಿಯಮ್ಮ ಆದರ್ಶ ಗೃಹಣಿ ಎನಿಸಿಕೊಂಡಿದ್ದಳು. ಹುರಳಿ-ಹುಲ್ಲು ಮೇವನ್ನು ಹೋರಿಗಳಿಗೆ ಅಣಿಗೊಳಿಸುವುದರ ಜತೆಗೆ ಕೃಷಿ ಕಾರ್ಯಗಳಲ್ಲೂ ಗಂಡನಿಗೆ ಸಹಕರಿಸುತ್ತಿದ್ದಳು. ಇಂತಹ ಆದರ್ಶ ದಂಪತಿಗಳ ಮೂರು ಜನ ಮುದ್ದು ಮಕ್ಕಳಲ್ಲಿ ಏಕೈಕ ಹೆಣ್ಣು ಮಗುವೇ ಅಕ್ಕಾಯಮ್ಮ.
                                  
            ಅಕ್ಷರ ಬರದ ಆ ಕಾಲದಲ್ಲಿ ಶಾಲೆಗಳು ಇರಲ್ಲಿಲ್ಲ. ಇದ್ದರೂ ಸಾಮಾನ್ಯ ಜನರಿಂದ ಅವು ದೂರದಲ್ಲೇ ಇದ್ದವು. ಆ ಅವಧಿಯಲ್ಲಿ ಸಾಮಾನ್ಯರ ಆಶಾದೀಪಗಳೇ-ಕೂಲಿಮಠಗಳು. ಪರಂಗಿಯವರ ಕಾಲದಲ್ಲಿ ತಾವರೆಕೆರೆಯ ಆಸುಪಾಸಿನ ಅರಸನಹಳ್ಳಿಯಲ್ಲಿ ಸ್ವಾಮಿ ಚಿನ್ಮಯನಂದಾ ಅವರ ಒಂದು ಮಠವಿತ್ತು. ಅದರಲ್ಲಿ ಒಂದು ದೇವಸ್ಥಾನವೂ ಸೇರಿತ್ತು. ರಜಪೂತರ ಬಾವಾಜಿಯಪ್ಪ ಎನ್ನುವ ಗುರುಗಳು ಆ ದೇವಸ್ಥಾನವನ್ನು ಕೂಲಿಮಠವಾಗಿ ಮಾರ್ಪಡಿಸಿದರು. ಜಾತಿ ಮತಗಳ ಅಂತರವನ್ನು ದೂಡಿ ಸರ್ವರಿಗೂ ವಿದ್ಯಾದಾನವನ್ನು ಮಾಡಿದರು. ಗ್ರಾಮಸ್ಥರೆಲ್ಲಾ ಸೇರಿ ಅವರಿಗೆ ಎಂಟಾಣೆ ಸಂಬಳವನ್ನು ನೀಡುತ್ತಿದ್ದರು. ಅಲ್ಲದೆ ತಾವು ಬೆಳೆದ ಧವಸಧಾನ್ಯಗಳಲ್ಲಿ ಒಂದು ಪಾಲನ್ನು ಅವರಿಗೂ ನೀಡುತ್ತಿದ್ದರು. ಆ ಗುರುವಿನ ಗುಣಗಳು ತುಂಬಾ ಮೇಲ್ಮಟ್ಟದವಾಗಿದ್ದವು.ನಾವು ಮನೆಯಲ್ಲಿ ಕೆಲವು ಸಾರಿ ಊಟತಿಂಡಿಗಳನ್ನು ತನ್ನದೆ ಹೋಗುತ್ತಿದ್ದುಂಟು. ಆಗ ಗುರುಗಳು ನನ್ನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ನಮಗೆ ಊಟವನ್ನು ಮಾಡಿಸುತ್ತಿದ್ದರು. ಎಲ್ಲ ಮಕ್ಕಳಿಗೂ ಮನಸ್ಸಿಗೆ ನಾಟುವ ರೀತಿಯಲ್ಲಿ ಆಟಪಾಠಗಳನ್ನು ಹೇಳಿಕೊಡುತ್ತಿದ್ದರು. ಆಗ ಹೀಗಿನ ರೀತಿಯಲ್ಲಿ ಕಪ್ಪು ಹಲಗೆ ನಾವು ಕಂಡಿಲ್ಲಿ. ನೆಲದ ಮರಳಿನಲ್ಲಿ ಅಕ್ಷರಾಭ್ಯಾಸ ಆರಂಭವಾಗುತ್ತಿತ್ತು. ಹೀಗೆ ನಾನು ಮೂರನೆಯ ಈಯತ್ತಿನ ತನಕ ಓದಿದೆ. ಆಗಿನ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವುದು ಅಪರಾಧವೆಂದು ಜನ ನಂಬಿದ್ದರು. ಆದರೆ ನಮ್ಮಪ್ಪ ಮುದ್ದುಮಗಳು ಎನ್ನುವ ಕಾರಣಕ್ಕೆ ನನ್ನನ್ನು ಶಾಲೆಗೆ ಕಳುಹಿಸಿದರು. ಮೂರನೆಯ ಈಯತ್ತು ಓದುವಾಗಲೇ ಶಾಲೆಯನ್ನು ನಾನು ಬಿಟ್ಟು ಹೋರಿಗಳಿಗೆ ಹುಲ್ಲು ತರುವುದು, ಮನೆಕೆಲಸಗಳಲ್ಲಿ ಅಮ್ಮನಿಗೆ ಸಹಾಯ ಮಾಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಒಟ್ಟಾರೆ ಆ ಕಾಲದಲ್ಲಿ ನಾನು ಮೂರನೆಯ ಈಯತ್ತಿನ ತನಕ ಓದಿದು ನನ್ನ ಸಾಧನೆಯಲ್ಲವೆ ?

          ನಾನು ಶಾಲೆಗೆ ಹೋಗುತ್ತಿರುವ ಆ ಸಮಯದಲ್ಲಿ ನಮ್ಮೂರಿನಲ್ಲಿ ತುಂಬಾ ಬೀದಿ ನಾಟಕಗಳನ್ನು ಆಡುತ್ತಿದ್ದರು. ಸತೀಸಕೂಬಾಯಿ. ಶನಿಮಹಾತ್ಮನ ಕಥೆಗಳನ್ನು,ಕೋಲಾಟದಂತಹ ಮನರಂಜನೆಯ ಕಾರ್ಯಗಳು ದಿನದ ದಣಿವನ್ನು ಪರಿಹರಿಸುತ್ತಿದ್ದವು. ಇಂತಹ ಕಲಾ ರಸಿಕರು ರಾತ್ರಿಗಟ್ಟಲೇ ಹಾಡುತ್ತಿದ್ದರು.ನನಗೆ ಮತ್ತು ನಮ್ಮ ಚಿಕ್ಕಮ್ಮನ ಮಗಳಾದ ವೆಂಕಟಗಿರಿಯಮ್ಮನಿಗೆ ಈ ಕಥೆಗಳು ಮತ್ತು ಅದರಲ್ಲಿನ ಹಾಡುಗಳು ಚಿಕ್ಕವರಿದ್ದಾಗಲೇ ಬಾಯಿಪಾಠವಾಗಿದ್ದವು. ನಾವು ಮನೆಯಲ್ಲಿ ಅಪ್ಪಮ್ಮಂದಿರ ಮುಂದೆ ಇವುಗಳನ್ನು ಹಾಡುತ್ತಿರಲಿಲ್ಲ. ಹುಲ್ಲಿಗೋ ಬೇರೆ ಕೆಲಸದ ನಿಮಿತ್ತ ಹೊರಹೋದಾಗ ಗೊಣಗುವುದು ಅಥವಾ ಯಾರು ದಾರಿಯಲ್ಲಿ ಕಾಣಿಸದಿದ್ದಾಗ ಜೋರಾಗಿ ಹಾಡುವುದನ್ನು ಮಾಡುತ್ತಿದ್ದೆವು. ನಮ್ಮೂರಿನಲ್ಲಿ ಯಾವುದಾದರೂ ಮದುವೆ ಅಥವಾ ಶುಭಕಾರ್ಯಗಳು(ಮೈನೆರೆಯುವುದು, ಗುಡಿಸಲಿಗೆ ಹಾಕುವುದು) ನಡೆದಾಗ ಅಮ್ಮನ ಜೊತೆಗೆ ಹೋಗುತ್ತಿದ್ದೆನು. ಅಲ್ಲಿ ಒಸಗೆ, ಸೋಬಾನೆ ಹಾಡುಗಳನ್ನು ಹಿರಿಯ ಮುದುಕಿಯರಿಂದ ಕೇಳಿಸಿಕೊಳ್ಳುತ್ತಿದ್ದೆವು.

           ಹೆಣ್ಣು ಸಮರ್ಥಳಾಗುವುದು ಜೀವನದ ಒಂದು ಅದ್ಭುತ ಘಟ್ಟ. ಆ ಹೆಣ್ಣು ಮಗುವನ್ನು ಬಾಗಿಲಾಚೆಯಿಡುವುದು ಸಂಪ್ರದಾಯ. ತಲೆಗೆ ಅರಳೆಣ್ಣಿ ಜೊತೆಗೆ ಮೂರು ರೀತಿಯ ಎಣ್ಣೆಗಳಿಂದ ತಲಂಟಿ(ಅಭ್ಯಂಜನ).ಮೈಗೆ ಅರಸಿನವಚ್ಚಿ ಬಿಸಿ ನೀರಿನ ಸ್ನಾನ ಮಾಡಿಸುತ್ತಿದ್ದರು. ಸೋದರ ಮಾವನಿಗೆ ಸುದ್ಧಿ ಮುಟ್ಟಿಸಿ ಹೊಂಗೆ-ಊಡುಗ-ನೇರಳೆ ಸೊಪ್ಪಿನಿಂದ ಗುಡಿಸಲಾಕಿಸಿ ಮೂರು ದಿನಗಳು ವಸಗೆ ಕಾರ್ಯಗಳು ನಡೆಸುತ್ತಿದ್ದರು. ಚೆಕ್ಕಲಿ.ತಂಬಿಟ್ಟು.ಸಿಂಬಿಲುಂಟೆ,ಬಾಳೆ ಒಣಕೊಬ್ಬರಿ ತಿನ್ನಲು ನೀಡುತ್ತಿದ್ದರು. ಮೂರು ದಿನಗಳು ಮಾವನು ಹಾಕಿದ ಗುಡಿಸಲಿನಲ್ಲೆ ಇರುತ್ತದ್ದೆವು. ಪ್ರತಿದಿನವೂ ಸಂಜೆ ನಮಗೆ ಮುತ್ತೈದೆಯರು ವಸಗೆ ಹಾಕುತ್ತಿದ್ದರು. ಗೆಳತಿಯರು ನಮ್ಮ ಜೊತೆಗಿರುತ್ತಿದ್ದರು. ತುಂಟ ಮಾತುಗಳನ್ನು ಹೇಳುತ್ತಿದ್ದರು. ಮೂರನೆಯ ದಿನ ನಮ್ಮನ್ನು ಬಾಗಿಲಾಚೆ ನಿಲ್ಲಿಸಿ ಮೂವರು ಮುತ್ತೈದೆಯರು ಅರಿಸಿನ ಎಲೆಯನ್ನು ನೀಡಿ ಮನೆಯೊಳಗೆ ಕರೆದುಕೊಳ್ಳುತ್ತಿದ್ದರು.
                                  
         ಮದುಮಗನಿಗೆ ಸುದ್ಧಿ ತಿಳಿಸಿ ಸೋಬನಕ್ಕೆ ಕರೆತಂದು ಅವರಿಬ್ಬರನ್ನು ಒಂದು ಮಾಡುವುದು ನಮ್ಮ ಕಾಲದಲ್ಲಿತ್ತು. ಅದು ಜೀವನದ ಅತಿ ಸುಖಮಯವಾದ ಘಟನೆಯೆಂದೇ ಕರೆಯಬೇಕು. ಆಗಿನ ಸಂದರ್ಭದ ಹಾಡುಗಳು ಮನವನ್ನು ರಂಜಿಸುವಂತಹವು. ಈಗ ಏನಿದೆ ಬಿಡಿ. ಬರಿ ಸೋಕಿ. ಎಂದು ಅಜ್ಜಿ ಒಂದು ಹಾಡನ್ನು ಹಾಡ ತೊಡಗಿದಳು. ಆಗ ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ನವತನ ತುಂಬಿತ್ತು. ಆ ಹಾಡು ಹೀಗಿದೆ.

ಮಲ್ಲಿಗೆ ಮುಡಿಸ್ಯಾನ

ಮರಳಕ್ಕಿ ಕಟ್ಟ್ಯಾನ

ಇನ್ನೇನು ಮಗಳೇ ಎರವಾದೆ
ವಸವಸೆಗೆಂದಾರೆ

ಮುಸಮುಸನ ನಗತಾರೆ

ನಲ್ಲೆ ನಿನ್ನಳಿಯ ಬರುತ್ತಾನೆ ತಾಯಮ್ಮ

ಮಲ್ಲಿಗೆ ಮುಡಿಸೇ ಮಗಳೀಗೆ

ಬಾಲೆ ನೆರೆದವಳೇ

ಬಾಕಲಾಗೆ ನಿಂತವಳೇ

ತವರೀಗೇಳಿ ಕಳಿಸೇ ತಾಯಮ್ಮ
        ಹೀಗೆ ಮುದುಕಿಯರು ಹಾಡುತ್ತಿದ್ದರು. ನಾವು ಆರಂಭದಲ್ಲಿ ಸ್ವಲ್ಪ ನಾಚಿಕೆಯಿಂದಲೇ ಗೊಣಗುತ್ತಿದ್ದೆವು. ಕೆಲವು ದಿವಸಗಳ ನಂತರ ಅವರ ಜೊತೆ ನಾವು ಹಾಡುವುದನ್ನು ಆರಂಭಿಸಿದೆವು.ಹೀಗೆ ಮದುವೆಗೂ ಪೂರ್ವದಲ್ಲೆ ವಸಗೆ ಪದಗಳು,ಕೋಲಾಟದ ಪದಗಳು, ಸೋಭಾನೆ ಪದಗಳು ಕುರುಬದ್ಯಾವರ ಪದಗಳು,ಅಣ್ಣ-ತಂಗಿಯ ಆತ್ಮೀಯ ಸಂಬಂಧವನ್ನು ಹಾಗೂ ಅತ್ತಿಗೆಯ ಕ್ರೂರ ವರ್ತನೆಯನ್ನು-ಇವೆಲ್ಲದರ ಕಾರಣದಿಂದ ಅಣ್ಣ-ತಂಗಿಯ ಆತ್ಮಿಯ ಸಂಬಂಧ ಕೆಟ್ಟು ತಂಗಿಯ ಬದುಕು ಸಾವಿನೊಂದಿಗೆ ಅಂತ್ಯವಾಗುವ ಅತ್ಯಂತ ಕರುಣಾಜನಕ ಖಂಡಕಾವ್ಯವಾದ ರಾಮಣ್ಣನ ಹಾಡುಗಳು ಬಾಯಿ ಪಾಠವಾಗಿದ್ದವು. ಸಿನಿಮಾ ಅಥವಾ ಇನ್ನಾವುದೇ ಮನರಂಜನಾ ಮಾಧ್ಯಮಗಳ ಕನಸು ಇಲ್ಲದ ಕಾಲದಲ್ಲಿ ನಮಗೆ ರಂಜನೆ ನೀಡುವುದರ ಜೊತೆಗೆ ಹೊತ್ತು ಕಳೆಯಲು ಇದ್ದ ಸಾಧನಗಳು ಈ ಜಾನಪದ ಹಾಡುಗಳೇ. ಹೀಗೆ ನಮ್ಮೂರಿನ ಹಿರಿಯರೇ ನಮಗೆ ಮೊದಲ ಜಾನಪದ ಗುರುಗಳು ಎಂದು ಹೇಳಬಹುದು.
                                                      
          ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವಂತೆ ತಾವರೆಕೆರೆಯ ಮಾರಸಂದ್ರಹಳ್ಳಿಗೂ ಚಿಂತಾಮಣಿಯ ದೊಡ್ಡಿಕೊಂಡ್ರಹಳ್ಳಿಗೂ ಏನು ಸಂಬಂಧ ? ಎಂದು ಅಜ್ಜಿಯನ್ನು ಪ್ರಶ್ನಿಸಿದಾಗ ತನ್ನ ಬೊಚ್ಚು ಬಾಯಿ ಅಂಚುಗಳಲ್ಲಿ ಒಂದು ಕ್ಷಣ ಉಸಿ ನಗು ಮೂಡಿತು. ಮುಂದುವರಿದು ಹೇಳಿದಳು. ಚಿಂತಾಮಣಿ ಸಮೀಪದ ಸಿನ್ನಸಂದ್ರಕ್ಕೆ ನಮ್ಮಪ್ಪನ ತಂಗಿಯನ್ನು ಕೊಟ್ಟು ವಿವಾಹ ಮಾಡಿದ್ದರು. ಮುನಗನಹಳ್ಳಿಯಲ್ಲಿ ನಮ್ಮ ಚಿಕ್ಕಮ್ಮನವರು ಇದ್ದರು. ಅವರು ನಮ್ಮ ಯಜಮಾನರಿಗೆ ಗೊತ್ತಿದ್ದವರು. ಆ ಲೆಕ್ಕಚಾರದ ಮೇಲೆ ನನ್ನನ್ನು ದೊಡ್ಡಿಕೊಂಡ್ರಹಳ್ಳಿಗೆ ಕೊಟ್ಟರು. ನನಗೆ ಮದೆಯಾದಾಗ ಸುಮಾರು ಹತ್ತು ವರ್ಷದವಳಿರಬೇಕು. ನಮ್ಮ ಯಜಮಾನರಿಗೆ ಒಂದು ಹದಿನೇಳು ಹದಿನೆಂಟು ವರ್ಷವಾಗಿತ್ತು. ನಮ್ಮದು ಐದು ದಿನದ ಮದುವೆ. ಮದುವೆಯಾದ ನಂತರ ನಾನು ದೊಡ್ಡವಳು ಆಗುವ ತನಕ ನಮ್ಮೂರಿನಲ್ಲೇ ಇದ್ದೆ. ನಮ್ಮ ಕಾಲದಲ್ಲಿ ಸಮರ್ಥಳಾಗದೆ ಕಾಪುರಕ್ಕೆ ಕಳುಹಿಸುವ ಪದ್ದತಿಯಿರಲಿಲ್ಲ. ಈಗ ಬಿಡಿ ಎಲ್ಲವೂ ಅದಲು ಬದಲಾಗಿಬಿಟ್ಟಿದೆ. ಎಂದು ಒಂದು ನಿಟ್ಟುಸಿರು ಬಿಟ್ಟಳು.

          ದೊಡ್ಡಕೊಂಡ್ರಹಳ್ಳಿಯ ಮುನಿಶಾಮಪ್ಪನೆಂದರೆ ಸುತ್ತಾರು ಹಳ್ಳಿಗೆ ಗೊತ್ತಿದ್ದವರು. ಬಡತನವಿದ್ದರು ಗುಣದಲ್ಲಿ ಸಿರಿವಣತರು. ಮದುವೆಯಾದ ಮೇಲೆ ದನ-ಕುರಿಗಳನ್ನು ಮೇಯಿಸಿಕೊಂಡು ಕಾಲ ಕಳೆಯುತ್ತಿದರು. ಮದುವೆಯಾಗಯೂ ಜೊತೆಗಾತಿಯಿಲ್ಲದ ಏಕಾಂಗಿತನವನ್ನು ಕಳೆಯಲು ದನಕುರಿಗಳೊಂದಿಗೆ ಕಾಡಿನ ಮೊರೆ ಹೋಗಿದ್ದರು. ಒಂದು ದಿನ ಅವರಿಗೆ ನಮ್ಮ ಮನೆಯವರು ಒಂದು ಸಿಹಿಸುದ್ಧಿಯನ್ನು ಮುಟ್ಟಿಸಿದರು. ಅದೇ ನಾನು ಸಮರ್ಥಳಾಗಿರುವ ಸುದ್ಧಿ. ಆದರೆ ಗಂಡನ ಮನೆಯಿಂದ ವಸಗೆ ತಂದು ಸೋಬನ ಮಾಡದ ಹೊರೆತು ಹೆಣ್ಣನ್ನು ಕಳುಹಿಸುವ ಪದ್ಧತಿ ಇರಲಿಲ್ಲ.

ಮಲ್ಲಿಗೆ ಮುಡಿಸ್ಯೇಳೆ ಮಗಳೀಗೆ
ಅಲ್ಲದ ಏರೀ ಮ್ಯಾಲೆ
ಬೆಲ್ಲದ ಗೂಡಾರಯಿಸಿ
ನಲ್ಲೆ ನಿನ್ನಳಿಯ ಬರುತಾನೆ
ತಾಯಮ್ಮ

ಮಲ್ಲಿಗೆ ಮುಡಿಸೇ ಮಗಳೀಗೆ
ಸಿಕ್ಕಿ ಮೈನೆರೆದು
ಸೂರಲ್ಲಿ ನಿಂತವಳೇ
ಸುತ್ತಲೊಡ್ಡವನೇ
ಅವರಪ್ಪಾ ಮಳೆರಾಯಾ

ಸುಕ್ಕೀಗ ಹನ್ನೆರಡು ಪಲವಂದು

ಮಲ್ಲಿಗೆ ಮುಡಿಸೇ ಮಗಳೀಗೆ



ಬಾಲೆ ನೆರದವಳೇ

ಬಾಕಲಾಗೆ ನಿಂದವಳೆ

ನಿಮ್ಮಣ್ಣನಿಕ ಹೇಳ್ಕಳಿಸೇ

ತೌರಸೂರಿಗೆ

ಎಸರು ತಾರಮ್ಮಾ ನಿನ್ನ ತಾಯಮ್ಮಾಗೆ
         ಅದಕ್ಕೆ ಯಜಮಾನರು ಒಸಗೆಯನ್ನೆಲ್ಲ ತಯಾರಿಸಿ ಬಂಧುಗಳ ಜತೆಗೆ ನಮ್ಮೂರಿಗೆ ಹೊರಟು ಅರ್ಧ ದಾರಿಗೆ ಬಂದರು. ಆವೊತ್ತೇ ಮಳೆ ಬರಬೇಕೆ ? ಬಂದರೇ ಬರಲಿ ಕೆರೆಕಟ್ಟೆಗಳು ಒಡೆದು ಹೋಗಬೇಕೇ ? ಎಂತಹ ದುರಂತ ನೋಡಿ!! ಆಗ ನಮ್ಮ ಯಜಮಾನರು ನನ್ನನ್ನು ನೋಡುವ ಕಾತುರದಲ್ಲಿ ಮಳೆಯನ್ನು ಹೀಗೆ ಪ್ರಾಥರ್ಿಸಿದರಂತೆ..

ಒಸಕ್ವಾಟೊಸಕ್ವಾಟೇ
ಎಲೇ ನಾರಿ


ಅದೆಂತಾ ಒಸಕ್ವಾಟೇ

ಒಸಕ್ವಾಟೆ ಸುತ್ತೂರ ಒಂಬಾಳೆ

ಒತ್ತೋಗಿ ಬಾರೋ ಮಳೆರಾಯ

ಸಿರಿಗಂಧಾರಿ ನೆರದವಳೆ

ಬೆಂಗಳೂರು ಬೆಂಗಳೂರು
ಎಲೆ ನಾರಿ


ಅದೆಂತಾ ಬೆಂಗಳೂರೇ..

ಬೆಂಗಳೂರು ಸುತ್ತಾರ ಬೆಡಗೀತೆ

ಸಿರಿಗಂದಾರಿ ನೆರೆದವಳೇ

ಒತ್ತೋಗಿ ಬಾರೋ ಮಳೆರಾಯ

ಸಿರಿಗಂಧಾರಿ ನೆರೆದವಳೆ...

        ನಮ್ಮ ಯಜಮಾನರು ಮಹಾ ಕಲಾರಸಿಕರು. ಅವರು ಬೀದಿ ನಾಟಕದಲ್ಲಿ ಗೋಪಿಚಂದ್ರನಾಟಕದಲ್ಲಿ ಶ್ರೀಕೃಷ್ಣನ ಪಾತ್ರ. ಸತ್ಯ ಹರಿಶ್ಚಂದ್ರನ ವೇಷ ತೊಟ್ಟು ಬಂದರೇ ಇಡೀ ಸಭೆಯೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.ಅವರ ಹಾಡಲು ಆರಂಭಿಸಿದರೆ ಮನಸ್ಸಿರುವ ಮನುಷ್ಯರ ಕಣ್ಣುಗಳಲ್ಲಿ ನೀರು ಬರದಿರಲು ಸಾಧ್ಯವಿರಲಿಲ್ಲ. ಅಷ್ಟು ಗತ್ತು ಗಮತ್ತಿನಿಂದ ಹಾಡು-ಪದ್ಯಗಳನ್ನು ಹಾಡಿ ಮೋಡಿ ಮಾಡುತ್ತಿದ್ದರು. ಅಂತಹ ಪುಣ್ಯಾತ್ಮ ನನ್ನನ್ನು ಬಿಟ್ಟು ಹೋದ ನೋಡಿ. ಎಂದು ಮತ್ತೆ ಗಂಡನ ನೆನಪಾಗಿ ಕಣ್ಣಿನಲ್ಲಿ ನೀರಾಡಿದವು.
                                                
           ಉತ್ತನೂರು ರಾಜಮ್ಮನವರು ತಮ್ಮ ಮತ್ತು ಅಕ್ಕಾಯಮ್ಮನ ನಡುವಿನ ಸಂಬಂಧದ ಬುತ್ತಿಯನ್ನು ಬಿಚ್ಚತೊಡಗಿದರು. ಒಂದು ಸಲ ಈ ನೂರು ವರ್ಷದ ಮುದುಕಿ ನೂರೈದು ವರ್ಷದ ಈಕೆಯ ಗಂಡ ಮುನಿಶಾಮಪ್ಪ ಪರಂಗೋರ ಕಾಲದಾಗ ಕರೆಗಳೆಲ್ಲಾ ಒಡ್ಡು ಒಡೆದು ಊರುಗಳೆಲ್ಲಾ ಮುಳುಗಿದಾಗ ಮೀಸೆ ಸಿಗರಿದ ಹುಡುಗನಾಗಿ; ಕುರಿ ದನ ಕಾಯುತ್ತಿದ್ದನಂತೆ. ಎಂದು ಹೇಳಿದ ತಕ್ಷಣವೇ ಅಜ್ಜನ ನೆನಪಿನೊಂದಿಗೆ ಅವರ ಗುಣಗಾನವೂ ಅರಂಭವಾಯಿತು. ಅಂತಹ ಪುಣಾತ್ಮ ಸಿಗ್ತಾನಯೇ, ನನ್ನವರೋದಮ್ಯಾಕ ನನ್ದೆಲ್ಲಾ ಹೋಯ್ತು ಎಂದು ಒಂದೆರಡು ನಿಮಿಷ ಕಣ್ಣೀರು ಸುರಿದಳು. ಅಕ್ಕಾಯಮ್ಮ ಅಜ್ಜಿಗೆ ಉಡಿತುಂಬಾ ಅಡಿಕೆಲೆ ಕೊಟ್ಟು ಪುರಮಾಯಿಸಿ ಮಾಡಿ ಆ ಮಾತು ಈ ಮಾತುಗಳಿಂದ ಹೊಗಳಿ ಅಟ್ಟಕ್ಕೇರಿಸಿದಾಗ ಹಾಡಲು ತಯಾರಾಗಿ ಕುಂತುಬಿಡುತ್ತಿದ್ದಳು. ಉತ್ಸಾಹದ ಬುಗ್ಗೆಯಂತೆ ಸೊಬಗಿನ ಇಳಿಯವಯಸ್ಸಿನ ಅಕ್ಕಾಯಮ್ಮಜ್ಜಿ ಮದುವೆಯ ಹೆಣ್ಣಿನಂತೆ ಸ್ವಲ್ಪ ಸಿಗ್ಗು ಸ್ವಲ್ಪ ಬಿಂಕ ರವಷ್ಟು ಬಿನ್ನಾಣ ಕೊಸರುತ್ತಾ ಮಡಿಸಿದ ಮೊಣಕಾಲ ಚಿಪ್ಪಿನ ಮೇಲೆ ತಲೆ ಆನಿಸಿಕೊಂಡು ಹಾಡುತ್ತಿದ್ದಳು. ಅವುಗಳನ್ನು ಕೇಳುವ ಅದೃಷ್ಟ ಮೇಷ್ಟ್ರಂತಹವರಿಗಿಲ್ಲ. ಅಜ್ಜಿ ಒಂದು ನುಡುಗನ್ನು ಎಂದಾಗ ಇಲ್ಲ ಅಮ್ಮಣ್ಣಿ ಎಲ್ಲಾ ಮರ್ತೋಗಿದ್ದೀನಿ. ನೀನು ನುಡುಗೆತ್ತಕೊಟ್ರೆ ಹಾಡ್ತೀನಿ ಎಂದಾಗ ರಾಜಮ್ಮ ಅವರ ಧ್ವನಿಗೆ ಧ್ವನಿಗೂಡಿಸಿ ಅಜ್ಜಿ ಹಾಡ ತೊಡಗಿದಳು. ಮರೆತ ಯಾವುದೋ ಜೀವನದ ಪುಟ ತೆರೆದಂತೆ. ಕೋಲಾರದಲ್ಲಿರು ಬೀರೇದ್ಯಾವರನ್ನು ಆರಾಧಿಸುವ ಸಮಯದಲ್ಲಿ ಹಾಡುವ ಹಾಡುಗಳಲ್ಲಿ ಇದು ಪ್ರಮುಖವಾದ ಹಾಡಾಗಿದೆ. ಆದರೆ ಮರೆವಿನ ಕಾರಣದಿಂದ ಬಂದಷ್ಟು ಸುಗಮವಾಗಿ ಹಾಡಿದಳು.

ದ್ಯಾವರಪದ- ಅಣ್ಣ ಸನಿಕೆ ತಾರೋ


ತಮ್ಮ ಗುದ್ದಲಿ ತಾರೋ



ಕೋಳಾಲ ಮಣ್ಣ ತುಳಿಬಾರ ಸಿದ್ಧಯ್ಯ

ನಮ್ಮ ಹುಟ್ಟಿದ ಮನೆ ದ್ಯಾವರು

ಇರಾದೆ ಕೋಲಾರ
         ಎಂದು ಹಾಡಲು ಆರಂಭಿದಳು. ಹಾಡುವಾಗ ಆಕೆಯ ಮುಖದಲ್ಲಿ ಹೊಸ ಕಳೆ ಉಕ್ಕುತ್ತಿತ್ತು. ಬಹುಶಃ ನನ್ನ ಹಾಡನ್ನು ಮೆಚ್ಚುವ ಆಸಕ್ತರು ಇದ್ದಾರೆನ್ನಿಸಿತೋ ಏನೋ!!. ಹಾಡುತ್ತಾ ಹಾಡುತ್ತಾ ಬೇರೆ ಪರಿವೆಯೇ ಇಲ್ಲದಂತೆ ತನ್ಮಯಳಾಗಿ ಹಾಡುತ್ತಿದ್ದ ಅಜ್ಜಿಯನ್ನು ಹಿಂದೆ ಅವರ ಯಜಮಾನ ಮುನಿಶಾಮಪ್ಪನವರು ಹಿಂಗೆ ಅನ್ನುತ್ತಿದ್ದರಂತೆ ಏನೇ ಯಜಮಾನ್ತಿ ನೀ ಮದುವಣಿಗಿತ್ಯಂತೆ ಸೊಲ್ಲಾಡ್ತಾ ಕುಂತುಬುಟ್ರೆ ಮನೀಕ ಕಡೀ ಎಂತ್ಯೆ. ಎಂದಾಗ ಅವುದೌವುದು ಎದ್ದೇಳು ಯಜಮಾನ ಮಗ್ನು ನೇಗ್ಲು ಬಿಚ್ಚ್ಕೊಂಡು ಬಂದ್ರೆ ಕೊಟ್ಟಗ್ಯಾಗ ಹುಲ್ಲಿಲ್ಲ ಎಂದು ಎದ್ದು ಹೊರಡುತ್ತಿದ್ದಳು. ಅಷ್ಟೆ ಅಲ್ಲ ಎಚ್ಚರಿಸಿದಾಗಲೇ ಅಜ್ಜಿ ಇಹಲೋಕದ ಪರಿವೆಗೆ ಬರುತ್ತಿದ್ದದ್ದು ಅಲ್ಲದೆ ರಾಜಮ್ಮನವರು ಇವರ ಹಾಡುಗಳನ್ನು ಧ್ವನಿ ಮುದ್ರಿಸಿ ಅವರಿಗೆ ಕೇಳಿಸಿದ ಸಮಯದಲ್ಲಿ ಆ ಧ್ವನಿಗೆ ಕಿವಿ ನಿಮಿರಿಸಿಕೊಂಡು ಕುಳಿತ ಅಜ್ಜಿ ಆಶ್ಚರ್ಯ, ಹರ್ಷಗಳಿಂದ ಪಕ್ಕದಲ್ಲಿ ಕುಳಿತಿದ್ದ ಯಜಮಾನ ಮುನಿಶಾಮಪ್ಪನ ಪಕ್ಕೆ ತಿವಿದು ಕೇಳ್ದಾ ಯಜಮಾನ ಏನು ಪಸಂದಾಗೋದೋ ಪದ ಅಂದಾಗ ಹೌದಲ್ಲೇ ಯಜಮಾನ್ತಿ ನಿನ್ನ ಮಕಕ್ಕೆ ರಂಗುಬಳ್ಬುಟ್ರೆ ಪಸಂದಾಗಿ ಕುಣಿದೋಗ್ಬುಡ್ತೀಯ ಅನ್ನುತ್ತಿದ್ದರಂತೆ -ಎಂದು ಅಲ್ಲಿದ್ದವರು ಹೇಳಿದರು.ಅಷ್ಟು ಅನ್ಯೋನ್ಯ ಸಂಬಂಧ ಅವರದು. ವಿರಸವಿಲ್ಲದ ಸರಸಜೀವನ ನಡೆಸಿದರು. ಎಂದು ಅವರ ಸಮಕಾಲೀನರು ಹೇಳಿದ ತಕ್ಷಣ ಕವಿ ಮಿತ್ರ ಮೂಡಲಗೊಲ್ಲಳ್ಳಿ ನರಸಿಂಹಪ್ಪ- ಇವರಂತೆ ಅನ್ಯೋನ್ಯ ಬದುಕು ನಮಗಿಲ್ಲವಲ್ಲ ಎಂದರು. ಅಷ್ಟು ಹಾಡಗಾರಿಕೆಯಲ್ಲಿ ತನ್ಮಯಳಾಗಿ ಹಾಡುತ್ತಾಳೆ ಅಕ್ಕಾಯಮ್ಮಜ್ಜಿ.

               ಗಂಡ ಮುನಿಶಾಮಪ್ಪ ದನ,ಎಮ್ಮೆ, ಕುರಿಗಳನ್ನು ಮೇಯಿಸುತ್ತಾ ವ್ಯವಸಾಯಕ್ಕೆ ಒಗ್ಗತೊಡಗಿದರು. ವೀಳ್ಯಯ ತೋಟವನ್ನು ಬೆಳಸಿದರು. ಅಜ್ಜಿ ಅಕ್ಕಾಯಮ್ಮ ಸಂಸಾರ ಮತ್ತು ಮಕ್ಕಳ ಪಾಲನೆಯನ್ನು ಮಾಡಲು ಹಾಲು, ಮೊಸರು ಮತ್ತು ತುಪ್ಪವನ್ನು ಸುತ್ತಲ ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಿ ಮಕ್ಕಳ ಮತ್ತು ಸಂಸಾರವನ್ನು ಪೋಷಿಸ ತೊಡಗಿದಳು. ದಾರಿಯಲ್ಲಿ ಸಿಕ್ಕದವರಿಗೆ ಮಗ ಬಿಸಿಲಾಗ ಹೊಂಟೀಯ ಲೋಟ ಮಜ್ಜಿಗೆ ಕುಡ್ದು ಹೋಗು ಎಂದು ಅವರ ಹೊಟ್ಟೆಯನ್ನು ತಟ್ಟಗಾಗಿಸುತ್ತಿದ್ದಳು. ಅಂತಹ ಕರುಣಾಳು ಅಕ್ಕಾಯಮ್ಮನನ್ನು ಅವರು ಮಾಡಿದ ಒಳ್ಳೆಯ ಕೆಲಸಗಳೇ ಇಷ್ಟು ವರ್ಷಗಳು ಬದುಕಿಸಿರಬಹುದೇನೋ !

       ಅಕ್ಕಾಯಮ್ಮಜ್ಜಿ ಜಿಲ್ಲೆಯ ಅತ್ಯಂತ ಹಿರಿಯ ಶತಾಯುಷಿ ಜನಪದ ಗಾಯಕಿ. ಆಕೆ ಹಾಡುತ್ತಿದ್ದ ಕಾಲದಲ್ಲಿ ಆ ಅಪೂರ್ವ ಸಾಹಿತ್ಯವನ್ನು ಸಂಗ್ರಹ ಮಾಡಿದ್ದದರೆ, ಕೋಲಾರ ಸೀಮೆಯ ಜಾನಪದ ಸಾಹಿತ್ಯಕ್ಕೆ ಒಂದು ಹೊಸ ಹೊಳಪು ಪ್ರಾಪ್ತವಾಗುತ್ತಿತ್ತೇನೋ. ಇಂದು ತುಂಬು ಸಂಸಾರದ ಮಕ್ಕಳು ಮರಿಮಕ್ಕಳ ಜೊತೆಗಿದ್ದರು ಗಂಡನಿಲ್ಲದ ಏಕಾಂಗಿತನ ಆಕೆಯನ್ನು ಕಾಡುವಂತಿದೆ. ಆ ಏಕಾಂಗಿತನವನ್ನು ಕಳೆಯಲೆಂದು ಹಾಡುಗಳನ್ನು ಹಾಡಲು ದೀಘರ್ಾಯುಷ್ಯದ ಕಾರಣದಿಂದ ನೆನಪು ಮಾಸಿದೆ. ಆದರೂ ಸುತ್ತಮುತ್ತಲ ಊರುಗಳಲ್ಲಿ ಈಕೆಯೊಂದಿಗೆ ಹಾಡುತ್ತಿದ್ದ ಹಾಡುಗಾರ ಜಾನಪದ ಪರಂಪರೆಯನ್ನು ಮುಂದುವರಿಸುವಂತಾಗಬೇಕು. ಆ ಮೂಲಕ ಯುವ ಜನತೆಯು ಅವನ್ನು ಕಲಿಯುವಂತಾದಾಗ ಜಾನಪದ ಸಾಹಿತ್ಯಕ್ಕೆ ಒಂದು ನೆಲೆ ಸಿಗುತ್ತದೆ.
                                       
          ಅಕ್ಕಾಯಮ್ಮ ಹಾಡುವ ಸಂದರ್ಭದಲ್ಲಿ ಯಾವುದೇ ಅಕಾಡೆಮಿಗಳು ಸಂಘ-ಸಂಸ್ಥೆಗಳು ಗುತರ್ಿಸಿ ಪ್ರೋತ್ಸ್ಸಾಹ ನೀಡದಿರುವುದು ವಿಪಯರ್ಾಸವೆಂದೆ ಹೇಳಬೇಕಾಗುತ್ತದೆ. ಆದರೂ ಉತ್ತನೂರು ರಾಜಮ್ಮನವರು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಆಕೆಯ ಬಗ್ಗೆ ಅನೇಕ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಹಾಡುಗಳನ್ನು ಧ್ವನಿಮುದ್ರಿಸಿ ಆಗಿನ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಎಚ್,ಎಲ್.ನಾಗೇಗೌಡರಿಗೆ ಒದಗಿಸಿಕೊಟ್ಟಿದ್ದಾರೆ. ಅದಕ್ಕೆ ಅಕ್ಕಯಮ್ಮನವರಿಗೆ ಮೂವತ್ತು ರುಪಾಯಿಗಳ ಗೌರವಧನವು ಸಂಧಾಯ ಮಾಡಿದ್ದರು.ಆದರೆ ಶಾಶ್ವತವಾದ ಪ್ರಶಸ್ತಯಂತಹ ಪ್ರೋತ್ಸಹಗಳು ನೀಡಲಿಲ್ಲಿ. ಅದಕ್ಕೆ ಕಾರಣಗಳು ತಿಳಿಯದು. ಇತ್ತೀಚಿನ ದಿನಗಳಲ್ಲಿ ಚಿಂತಾಮಣಿಯ ಲಂಕೇಶ ಸಂವೇಧನೆ,ಓದುಗರವೇದಿಕೆ ಶ್ರೀಸಾಯಿ ಕಲಾನಿಕೇತನ ಹಾಗೂ ಜಾನಪದ ಅಕಾಡೆಮಿ ಪರವಾಗಿ ಇವರನ್ನು ಸನ್ಮಾಸಿಸಲಾಗಿದೆ. ಆದರೂ ಈ ಹಿರಿಯ ಚೇತನಕ್ಕೆ ಬದುಕಿನ ಅಂತಿಮ ಘಟ್ಟದಲ್ಲಾದರೂ ಸಕರ್ಾರಗಳು ಸಂಘ-ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಲಿಲ್ಲವಾದರೇ ಒಂದು ಕಲಾಪ್ರಕಾರವನ್ನು ನಿರ್ಲಕ್ಷಿದ ಹಾಗೆ ಆಗುತ್ತದೆ. ಅದು ಅಕ್ಷಮ್ಯ ಅಪರಾದವೆಂದೇ ಭಾವಿಸಬೇಕಾಗುತ್ತದೆ. ಅಕ್ಕಾಯಮ್ಮ ನೂರು ಹತ್ತು ವಸಂತಗಳಿಂದ ಸಾಧಿಸಿದ ಸಾಧನೆಗೆ ಬೆಲೆಯಿಲ್ಲದಾಗುತ್ತದೆ.























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ